ಮಂಡ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ: ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಪ್ರಕರಣ ದಾಖಲು

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭ್ರೂಣ ಹತ್ಯೆ ಪ್ರಕರಣ ಕುರಿತಂತೆ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ 1, ನಾಗಮಂಗಲ ತಾಲೂಕಿನ 2 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ.

Female foeticide case complaint registered against scanning centre in mandya gow

ಮಂಡ್ಯ (ಫೆ.13): ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭ್ರೂಣ ಹತ್ಯೆ ಪ್ರಕರಣ ಕುರಿತಂತೆ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ 1, ನಾಗಮಂಗಲ ತಾಲೂಕಿನ 2 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 55 ಸ್ಕ್ಯಾನಿಂಗ್ ಸೆಂಟರ್, 25 ಹಾಸ್ಪಿಟಲ್‌, 32 ಲ್ಯಾಬ್, 130 ಕ್ಲಿನಿಕ್ ಗಳನ್ನು ಪರಿಶೀಲಿಸಿರುವ ಬಗ್ಗೆ ನಿಯೋಜಿಸಿರುವ ವೈದ್ಯರು, ಅಧಿಕಾರಿಗಳು ಇಲ್ಲಿ ಯಾವುದೇ ಹೆಣ್ಣು ಭ್ರೂಣ ಲಿಂಗ ಪತ್ತೆ ಅಥವಾ ಅನಾಧಿಕೃತ ಕೃತ್ಯ ನಡೆಯುತ್ತಿಲ್ಲ ಎಂಬ ದೃಢೀಕರಣ ಪತ್ರವನ್ನು ನೀಡಬೇಕು ಎಂದರು.

ಈಗಾಗಲೇ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಿವು ಕಾರ್ಯಕ್ರಮ ಇನ್ನೂ ಚುರುಕುಗೊಳ್ಳಬೇಕು. ಜಾಗೃತಿ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಹೆಚ್ಚು ತೊಡಗಿಸಿಕೊಳ್ಳಿ ಎಂದರು.

ಗ್ರಾಮ ಮತ್ತು ವಾಡ್೯ ಸಭೆಗಳಲ್ಲಿ ಒಬ್ಬರೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ, ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ ಎಂದರು.

ಜನವರಿ ಮಾಹೆಯಿಂದ ಇಲ್ಲಿಯವರೆಗೆ 12 ವಾರಕ್ಕೂ ಮೇಲ್ಪಟ್ಟು ಗರ್ಭಪಾತವಾಗಿರುವ ಪ್ರಕರಣಗಳ ಮಾಹಿತಿ ಪಡೆದು ಅವುಗಳನ್ನು‌ ಪರಿಶೀಲಿಸಿ ಅದು ವೈದ್ಯಕೀಯ ಹಿನ್ನೆಲೆಯಲ್ಲಿ ವೈದ್ಯರ ಅಭಿಪ್ರಾಯದ ಮೇಲೆ ಆಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಮಹಿಳಾ ಪರ ಹೋರಾಟಗಾರರಾದ ಸುನಂದ ಜಯರಾಂ, ದೇವಿ, ಸಿ.ಕುಮಾರಿ, ವಿಮೋಚನ ಸಂಸ್ಥೆಯ ಮುಖ್ಯಸ್ಥ ಜನಾರ್ಧನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios