ಬೆಂಗಳೂರು(ಫೆ.27): ಮದ್ಯ ಸೇವಿಸಿ ಬಂದು ಹಲ್ಲೆ ನಡೆಸುತ್ತಿದ್ದ ಮಗನ ವರ್ತನೆಯಿಂದ ಬೇಸತ್ತು ತಂದೆಯೇ ಮಗನನ್ನು ಹತ್ಯೆ ಮಾಡಿರುವ ಘಟನೆ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಬ್ಬಿಗೆರೆ ಕರೇಕಲ್‌ ಗುಡ್ಡದ ನಿವಾಸಿ ಬಾಬರ್‌ (30) ಹತ್ಯೆಯಾದವನು. ಈ ಸಂಬಂಧ ಮೃತನ ತಂದೆ ಹುಸೇನ್‌ (66) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹುಬ್ಬಳ್ಳಿ: ಬೀದಿಗೆ ಬಂತು ಖ್ಯಾತ ವೈದ್ಯ ದಂಪತಿಯ ಕೌಟುಂಬಿಕ ಕಲಹ..!

ಬಾಬರ್‌ ಗಾರೆ ಕೆಲಸ ಮಾಡುತ್ತಿದ್ದು, ಅವಿವಾಹಿತನಾಗಿದ್ದ. ನಿತ್ಯ ಕುಡಿದು ಬಂದು ಪೋಷಕರ ಬಳಿ ಜಗಳವಾಡಿ, ಹಲ್ಲೆ ನಡೆಸುತ್ತಿದ್ದ. ಪೋಷಕರು ಎಷ್ಟುಬಾರಿ ಬುದ್ಧಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಸಂಜೆ ಕುಡಿಯಲು ತಂದೆಯ ಬಳಿ ಬಾಬರ್‌ ಹಣ ಕೇಳಿದ್ದ. ತಂದೆ ಹುಸೇನ್‌ ಹಣ ಕೊಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಬಾಬರ್‌ ತಂದೆಯನ್ನು ನಿಂದಿಸಿದ್ದ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿದ್ದು, ಹುಸೇನ್‌ ಮನೆಯಲ್ಲಿದ್ದ ಕೊಡಲಿಯಿಂದ ಬಾಬರ್‌ನ ತಲೆಗೆ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡ ಬಾಬರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಗಳದ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.