ಬೆಂಗಳೂರು(ಫೆ.03): ನಾನು ಆಡಳಿತರೂಢ ಬಿಜೆಪಿ ಶಾಸಕರೊಬ್ಬರ ಗನ್‌ಮ್ಯಾನ್‌ ಎಂದು ಹೇಳಿಕೊಂಡು, ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಉಪ್ಪಾರಪೇಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಮಳಲ್‌ಗಾಂವ ಗ್ರಾಮದ ನಾರಾಯಣ ರಾಮಚಂದ್ರ ಹೆಗಡೆ(30) ಬಂಧಿತ. ಕೆಲ ದಿನಗಳ ಹಿಂದೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ನೌಕರಿ ಕೊಡಿಸುವುದಾಗಿ ದಾವಣಗೆರೆ ಜಿಲ್ಲೆಯ ಯುವಕನೊಬ್ಬನಿಂದ 20 ಸಾವಿರ ಪಡೆದು ವಂಚನೆ ಮಾಡಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

ನಂಬಿಕೆ ಹುಟ್ಟಿಸಿ ವಂಚನೆ:

ಪಿಯುಸಿ ಪಾಸಾಗಿರುವ ಶಿರಸಿ ತಾಲೂಕಿನ ನಾರಾಯಣ, ಸ್ಥಳೀಯ ರಾಜಕೀಯ ಮುಖಂಡರ ಸಹವಾಸದಲ್ಲಿದ್ದ. ಆ ಕ್ಷೇತ್ರದ ಶಾಸಕರ ಗನ್‌ಮ್ಯಾನ್‌ಗಳ ಕಂಡು ಬೆರಗಾಗಿದ್ದ. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಗನ್‌ಮ್ಯಾನ್‌ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಲು ಸಂಚು ರೂಪಿಸಿದ್ದ. ಅಂತೆಯೇ ಗನ್‌ಮ್ಯಾನ್‌ಗಳಂತೆ ಸಫಾರಿ ಬಟ್ಟೆಹೊಲಿಸಿಕೊಂಡ ಆತ, ಗನ್‌ ಮಾದರಿಯ ಲೈಟರ್‌ ಅನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ನಾನು ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕರ ಭದ್ರತಾ ಸಿಬ್ಬಂದಿ. ನನಗೆ ಶಾಸಕರು ಆತ್ಮೀಯರಾಗಿದ್ದಾರೆ ಎಂದು ಬೆಂಗಳೂರು, ದಾವಣಗೆರೆ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಡುತ್ತಿದ್ದ.

ಹುಬ್ಬಳ್ಳಿ: ಜೀವ ಬೆದರಿಕೆ ಹಾಕಿದ ಪೊಲೀಸಪ್ಪನ ವಿರುದ್ಧವೇ ಪ್ರಕರಣ ದಾಖಲು

ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಮತ್ತು ವಾಹನಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಆತನಿಗೆ ದಾವಣಗೆರೆಯ ಯುವಕನ ಪರಿಚಯವಾಗಿದ್ದು, ಚಾಟಿಂಗ್‌ ಬಳಿಕ ಮೊಬೈಲ್‌ ಸಂಖ್ಯೆ ವಿನಿಮಿಯವಾಗಿ ವ್ಯಾಟ್ಸಾಪ್‌ನಲ್ಲಿ ಸಂವಹನ ನಡೆದಿದೆ. ತನ್ನ ಫೋಟೋಗಳನ್ನು ಆತನಿಗೆ ಕಳುಹಿಸಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕರ ಗನ್‌ಮ್ಯಾನ್‌ ಎಂದು ನಂಬಿಸಿದ್ದ.

ಫೋಟೋ ನೋಡಿ ಮರುಳಾದ ಯುವಕನಿಗೆ ತೋಟಗಾರಿಕೆ ಅಥವಾ ಪೊಲೀಸ್‌ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿದ್ದ. ತರುವಾಯ ದಾವಣಗೆರೆಗೆ ಹೋಗಿದ್ದ ನಾರಾಯಣ, ಅಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿಗೆ ಕರೆಸಿಕೊಂಡಿದ್ದ. ಇದರಿಂದ ಯುವಕನಿಗೆ ಆರೋಪಿ ಮೇಲೆ ವಿಶ್ವಾಸ ಮೂಡಿತು. ಕೊನೆಗೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 20 ಸಾವಿರ ಪಡೆದು ಆರೋಪಿ, ಸಂತ್ರಸ್ತನ ಆಧಾರ್‌, ಪಡಿತರ, ಅಂಕಪಟ್ಟಿ ದಾಖಲೆ ತೆಗೆದುಕೊಂಡು ಆತನನ್ನು ಮಂಗಳವಾರ ಬೆಂಗಳೂರಿಗೆ ಕರೆತಂದಿದ್ದ. ಆನಂತರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಯುವಕನಿಗೆ ಹೇಳಿ ನಾರಾಯಣ ತಪ್ಪಿಸಿಕೊಂಡಿದ್ದ. ಆನಂತರ ಆತನ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಕೆಲವು ತಾಸುಗಳು ನಾರಾಯಣ ನಿರೀಕ್ಷೆಯಲ್ಲಿ ಕಾದು ಸುಸ್ತಾದ ಯುವಕನಿಗೆ, ಕೊನೆಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಶಿವಸ್ವಾಮಿ ನೇತೃತ್ವದ ತಂಡವು, ಆರೋಪಿ ಮೊಬೈಲ್‌ ಮತ್ತು ಫೋಟೋ ಆಧರಿಸಿ ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಲವು ಜನರಿಗೆ ಸರ್ಕಾರಿ ಉದ್ಯೋಗದಾಸೆ ತೋರಿಸಿ ಆರೋಪಿ ನಾರಾಯಣ ವಂಚಿಸಿರುವ ಶಂಕೆ ಇದೆ. ಆತನಿಂದ ವಂಚನೆಗೊಳಗಾದವರು ದೂರು ನೀಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.