ಮದುವೆಗೆ 3 ದಿನಗಳಿರುವಾಗ ಮಗಳಿಗೆ ಪೊಲೀಸರ ಮುಂದೆಯೇ ಗುಂಡಿಕ್ಕಿ ಕೊಂದ ಅಪ್ಪ
ಮದುವೆಗೆ 3 ದಿನ ಮುನ್ನ ಮಗಳನ್ನು ಅಪ್ಪನೇ ಗುಂಡಿಟ್ಟು ಕೊಂದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ತನು ಗುರ್ಜರ್ ಎಂಬ ಯುವತಿ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದಕ್ಕೆ ಪ್ರತಿಭಟಿಸಿ ವೀಡಿಯೊ ಮಾಡಿದ್ದಳು. ಪೊಲೀಸರ ಮಧ್ಯಸ್ಥಿಕೆ ವೇಳೆ ತಂದೆ ಮಗಳಿಗೆ ಗುಂಡು ಹಾರಿಸಿದ್ದಾನೆ.
ಗ್ವಾಲಿಯರ್: ಆಕೆಯ ಮದುವೆಗೆ ಇನ್ನೇನು 4 ದಿನಗಳಿತ್ತಷ್ಟೇ ಆದರೆ ಹಸೆಮಣೆಯೇರಿ ಖುಷಿ ಖುಷಿಯಾಗಿ ಇರಬೇಕಾದ ಮಗಳನ್ನು ಅಪ್ಪನೇ ಮಸಣಕ್ಕೆ ಕಳುಹಿಸಿದ್ದಾನೆ. ಅಪ್ಪನೇ ಪೊಲೀಸರ ಮುಂದೆಯೇ ಮಗಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಗಳು ತಾವು ನೋಡಿದ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪದೇ ಆಕೆಯ ಇಷ್ಟದಂತೆ ಬೇರೆ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದರಿಂದ ಕೋಪದ ಕೈಗೆ ಬುದ್ಧಿಕೊಟ್ಟ ಅಪ್ಪ ತನ್ನದೇ ಮಗಳನ್ನು ಕೈಯಾರೆ ಹತ್ಯೆ ಮಾಡಿದ್ದಾನೆ. 20 ವರ್ಷ ಮಗಳು ತನು ಗುರ್ಜರ್ ಅಪ್ಪನಿಂದಲೇ ಕೊಲೆಯಾದ ನತದೃಷ್ಟ ಮಗಳು. ಪೊಲೀಸ್ ಅಧಿಕಾರಿಗಳ ಮುಂದೆಯೇ ಈ ಕೊಲೆ ನಡೆದಿದೆ. ಪೋಷಕರು ನಿಗದಿ ಮಾಡಿದ ಮದುವೆಗೆ ಮಗಳು ತನು ಗುರ್ಜರ್ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಳು.
ಮಂಗಳವಾರ ಸಂಜೆ 9 ಗಂಟೆ ಸುಮಾರಿಗೆ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಈ ಕೊಲೆ ನಡೆದಿದೆ. ಅದೇ ದಿನ ಬೆಳಗ್ಗೆ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಿಂದ ಕೋಪಗೊಂಡ ತಂದೆ ಮಹೇಶ್ ಗುರ್ಜರ್ ದೇಶಿ ಬಂದೂಕಿನಿಂದ ಆಕೆಗೆ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ತನುವಿನ ಸೋದರ ಸಂಬಂಧಿ ರಾಹುಲ್ ಮಹೇಶ್ ಗುರ್ಜರ್‌ನ ಈ ಕೆಲಸಕ್ಕೆ ಸಹಚರನಾಗಿ ಕಾರ್ಯನಿರ್ವಹಿಸಿದ್ದು, ಹೆಚ್ಚುವರಿ ಗುಂಡುಗಳನ್ನು ಹಾರಿಸಿ ಆಕೆಯ ಸಾವನ್ನು ಖಚಿತಪಡಿಸಿದ್ದಾನೆ.
ತನ್ನ ಹತ್ಯೆಗೆ ಕೆಲವೇ ಗಂಟೆಗಳ ಮೊದಲು, ತನು ಗುರ್ಜರ್ ತನ್ನ ಕುಟುಂಬದವರು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. 52 ಸೆಕೆಂಡುಗಳ ವೀಡಿಯೊದಲ್ಲಿ, ತನ್ನ ತಂದೆ ಮಹೇಶ್ ಮತ್ತು ಇತರ ಕುಟುಂಬ ಸದಸ್ಯರು ತನ್ನ ಸಂಕಷ್ಟಕ್ಕೆ ಕಾರಣರೆಂದು ಹೇಳಿದ್ದು, ತನಗೆ ಜೀವಭಯವಿದೆ ಎಂದು ಹೇಳಿಕೊಂಡಿದ್ದಳು. ನಾನು ವಿಕ್ಕಿಯನ್ನು ಮದುವೆಯಾಗಲು ಬಯಸಿದ್ದೇನೆ. ನನ್ನ ಮನೆಯವರು ಆರಂಭದಲ್ಲಿ ಇದಕ್ಕೆ ಒಪ್ಪಿದರು ಆದರೆ ನಂತರ ನಿರಾಕರಿಸಿದರು. ಅವರು ಪ್ರತಿದಿನ ನನ್ನನ್ನು ಹೊಡೆಯುತ್ತಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಏನಾದರೂ ಸಂಭವಿಸಿದರೆ, ನನ್ನ ಕುಟುಂಬವೇ ಜವಾಬ್ದಾರವಾಗಿರುತ್ತದೆ ಎಂದು ತನು ವೀಡಿಯೊದಲ್ಲಿ ಹೇಳಿದ್ದಾಳೆ.
ಈಕೆ ವೀಡಿಯೋದಲ್ಲಿ ಉಲ್ಲೇಖಿಸಿದ ವಿಕ್ಕಿ ಎಂಬಾತ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆರು ವರ್ಷಗಳಿಂದ ತನು ಜೊತೆ ಸಂಬಂಧ ಹೊಂದಿದ್ದ. ತನು ಗುರ್ಜರ್‌ನ ವೀಡಿಯೋ ವೈರಲ್ ಆದ ನಂತರ, ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳು ತನುವಿನ ಪೋಷಕರು ಹಾಗೂ ಆಕೆಯೊಂದಿಗೆ ಮಧ್ಯಸ್ಥಿಕೆ ವಹಿಸಲು ತನು ಅವರ ಮನೆಗೆ ಧಾವಿಸಿದರು. ಸಮುದಾಯದ ಪಂಚಾಯತ್ ಕೂಡ ನಡೆಯುತ್ತಿದ್ದು, ವಿಷಯವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು.
ಈ ಸಂಧಾನದ ಸಮಯದಲ್ಲಿ ತನು ತಾನು ಮನೆಯಲ್ಲಿಯೇ ಇರಲು ನಿರಾಕರಿಸಿದ್ದಾಳೆ. ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಹಿಂಸೆಗೊಳಗಾದ ಮಹಿಳೆಯರನ್ನು ಬೆಂಬಲಿಸುವ ಉದ್ದೇಶದಿಂದ ಸರ್ಕಾರ ನಡೆಸುತ್ತಿರುವ ಒನ್-ಸ್ಟಾಪ್ ಸೆಂಟರ್‌ಗೆ ಕರೆದೊಯ್ಯಲು ಹೇಳಿದ್ದಾಳೆ. ಇದೇ ಅವಳ ತಂದೆ ಅವಳೊಂದಿಗೆ ಖಾಸಗಿಯಾಗಿ ಮಾತನಾಡಲು ಮುಂದಾಗಿದ್ದು, ಆಕೆಯ ಮನವೊಲಿಸುವ ಯತ್ನ ಅದಾಗಿತ್ತು. ನಂತರ ನಡೆದದ್ದು ಯಾರೂ ಊಹಿಸದ ಘಟನೆ. ತನ್ನ ಬಳಿ ಇದ್ದ ದೇಶೀಯ ಬಂದೂಕಿನಿಂದ ಮಹೇಶ್ ತನ್ನ ಮಗಳ ಎದೆಗೆ ಗುಂಡು ಹಾರಿಸಿದ. ಅದೇ ಸಮಯದಲ್ಲಿ ಜೊತೆಗಿದ್ದ ರಾಹುಲ್ ಹಾರಿಸಿದ ಗುಂಡುಗಳು ತನುವಿನ ಹಣೆ, ಕುತ್ತಿಗೆ ಮತ್ತು ಅವಳ ಕಣ್ಣು ಮತ್ತು ಮೂಗಿನ ನಡುವಿನ ಪ್ರದೇಶಕ್ಕೆ ತಗುಲಿದವು. ಇದರಿಂದ ತಕ್ಷಣವೇ ಕುಸಿದು ಬಿದ್ದ ತನು ಅಲ್ಲೇ ಸಾವನ್ನಪ್ಪಿದ್ದಾಳೆ.
ನಂತರ ತಂದೆ ಮತ್ತು ಸೋದರ ಸಂಬಂಧಿ ರಾಹುಲ್ ಬಂಧೂಕನ್ನು ಪೊಲೀಸರು ಮತ್ತು ಕುಟುಂಬ ಸದಸ್ಯರತ್ತ ತಿರುಗಿಸಿ, ಮತ್ತಷ್ಟು ಹಿಂಸಾಚಾರದ ಬೆದರಿಕೆ ಹಾಕಿದ್ದಾರೆ. ಈ ವೇಳೆ ಪೊಲೀಸರು ಮಹೇಶ್‌ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಆದರೆ ರಾಹುಲ್ ಪಿಸ್ತೂಲ್ ಸಮೇತ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಜನವರಿ 18 ರಂದು ತನುವಿನ ಮದುವೆ ನಿಗದಿಯಾಗಿದ್ದು, ಮದುವೆಗೆ ಭರದ ಸಿದ್ಧತೆ ನಡೆದಿತ್ತು.