ಉತ್ತರ ಕನ್ನಡ: ಎಷ್ಟೇ ಜಾಗೃತಿ ಮೂಡಿಸಿದರೂ ವಂಚನೆಗೊಳಗಾಗುತ್ತಿರುವ ಜನ, ಕೋಟಿಗೂ ಹೆಚ್ಚು ಹಣ ಸೈಬರ್ ಕಳ್ಳರ ಪಾಲು
ಉತ್ತರ ಕನ್ನಡ ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸುಮಾರು 43 ಲಕ್ಷ ರೂ. ಹಣ ಕಳೆದುಕೊಂಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದರೆ, 2023ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳವರೆಗೆ ಸುಮಾರು 1.21 ಕೋಟಿ ರೂ. ಸೈಬರ್ ವಂಚಕರ ಪಾಲಾಗಿರುವ ಬಗ್ಗೆ ಪ್ರಕರಣ ದಾಖಲಾಗಿವೆ.
ಉತ್ತರಕನ್ನಡ(ನ.05): ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮತ್ತೆ ಮತ್ತೆ ವಂಚನೆಗೊಳಗಾಗ್ತಾನೆ ಇರ್ತಾರೆ. ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ಉತ್ತರ ಕನ್ನಡದಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 1.64 ಕೋಟಿ ರೂ. ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗಿರುವುದು ಬೆಳಕಿಗೆ ಬಂದಿದೆ.
ಓಟಿಪಿ ಪಡೆದು ವಂಚನೆ, ಎಟಿಎಂ ಕಾರ್ಡ್ ಹಾಳಾಗಿದೆ ಎಂದು ವಂಚಿಸುವ ಪ್ರಕರಣಗಳು ಹೆಚ್ಚಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಅಲ್ಲದೇ, ಪಾರ್ಟ್ ಟೈಮ್ ಜಾಬ್ ಆಫರ್, ಗಿಫ್ಟ್ ಅಮಿಷ, ಆನ್ ಲೈನ್ ಬ್ಯುಸಿನೆಸ್, ಕೆವೈಸಿ ಅಪ್ಡೇಟ್ ನೆಪದಲ್ಲಿ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದ ವಂಚಿಸುವ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಅಮಾಯಕರ ಜೊತೆ ವಿದ್ಯಾಂವತರೂ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದ್ದು, ಅದರಲ್ಲೂ ಹೆಚ್ಚಾಗಿ ಯುವಕರೇ ವಂಚನೆಗೊಳಗಾಗುತ್ತಿರುವುದು ಆತಂಕಕಾರಿ.
ಹಿಂದೂ ದೇವರನ್ನ ನಿಂದಿಸಿದವನ ಬಣ್ಣ ಬಯಲು ಮಾಡಿದ್ದ ಯುವಕ ಆತ್ಮಹತ್ಯೆ: ಡೆತ್ ನೋಟ್ ಬಯಲು ಮಾಡ್ತು ಸಾವಿನ ಸೀಕ್ರೆಟ್..!
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸುಮಾರು 43 ಲಕ್ಷ ರೂ. ಹಣ ಕಳೆದುಕೊಂಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದರೆ, 2023ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳವರೆಗೆ ಸುಮಾರು 1.21 ಕೋಟಿ ರೂ. ಸೈಬರ್ ವಂಚಕರ ಪಾಲಾಗಿರುವ ಬಗ್ಗೆ ಪ್ರಕರಣ ದಾಖಲಾಗಿವೆ. ಸಿಇಎನ್ ಪೊಲೀಸ್ ಠಾಣೆಯೊಂದರಲ್ಲಿ ಕೋಟಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದರೆ, ಇತರೆ ಪೊಲೀಸ್ ಠಾಣೆಗಳಲ್ಲಿ ಹಾಗೂ ಆನ್ ಲೈನ್ ಮೂಲಕ ದಾಖಲಾದ ದೂರುಗಳೆಲ್ಲಾ ಸೇರಿ ಜಿಲ್ಲೆಯಲ್ಲಿ 2 ಕೋಟಿ ರೂ. ಗೂ ಅಧಿಕ ಹಣ ವಂಚನೆಯಾಗಿರುವುದು ವರದಿಯಾಗಿದೆ.
ಸೈಬರ್ ಅಪರಾಧಕ್ಕೆ ಹೆಚ್ಚಾಗಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಕಳವಳಕಾರಿ. ಸೈಬರ್ ಅಪರಾಧದಲ್ಲಿ ಸಂತ್ರಸ್ತನ ಸಹಾಯ ಇಲ್ಲದೇ ಅಪರಾಧ ಮಾಡಲು ಸಾಧ್ಯವೇ ಇಲ್ಲ. ಓಟಿಪಿ ಶೇರ್ ಮಾಡದೇ, ಲಿಂಕ್ ಕ್ಲಿಕ್ ಮಾಡದೇ ವಂಚನೆಗೊಳಗಾಗಲು ಸಾಧ್ಯವಿಲ್ಲ. ಕೆಲವು ಅನಧಿಕೃತ ಆ್ಯಪ್ ಗಳನ್ನ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಬಿಡಬೇಕು. ಒಂದೊಮ್ಮೆ ಅಂತಹ ಆ್ಯಪ್ ಡೌನ್ ಲೋಡ್ ಮಾಡಿದರೆ ನಮ್ಮ ಎಲ್ಲಾ ಮಾಹಿತಿ ಅವರಿಗೆ ಸೋರಿಕೆ ಆಗಬಹುದು. ಕೆಲಸ ಕೊಡುವ ನೆಪದಲ್ಲಿ ವಂಚನೆ ಹೆಚ್ಚಾಗಿದೆ. ಪರಿಚಯ ಇಲ್ಲದ ವ್ಯಕ್ತಿಗಳ ಜತೆ ಫೇಸ್ ಬುಕ್ ನಲ್ಲಿ ಸ್ನೇಹಿತರಾಗುವ ಮುನ್ನ ಎಚ್ಚರಿಕೆ ವಹಿಸಬೇಕು. ಯಾವುದೇ ಫ್ರಾಡ್ ಆದಲ್ಲಿ ಜನರು ತಕ್ಷಣ 1930 ಟಾಲ್ ಫ್ರೀ ನಂಬರ್ ಗೆ ಕರೆ ಮಾಡಿ ದೂರು ದಾಖಲು ಮಾಡಬೇಕು. ನಂತರ ಸೈಬರ್ ಕ್ರೈಂ ಪೊಲೀಸರು ವಾಟ್ಸಪ್ ಮೂಲಕ ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಆಧಾರ್ ಖಾರ್ಡನ್ನು ಪಡೆಯುತ್ತಾರೆ. ಇದಾದ ನಂತರ ವಂಚನೆಗೊಳಗಾದ ಹಣವನ್ನ ಬೇರೆ ಅಕೌಂಟ್ ಗೆ ವರ್ಗಾವಣೆ ಆಗದಂತೆ ತಡೆಹಿಡಿಯುತ್ತಾರೆ.
ಪೊಲೀಸ್ ಠಾಣೆಗೆ ದೂರು ಕೊಡಲು ಸಾಧ್ಯವಾಗದವರು ಎನ್ ಸಿ.ಸಿ.ಆರ್ ಪೋರ್ಟಲ್ ಮೂಲಕ ಆನ್ ಲೈನ್ ಮೂಲಕವೇ ದೂರು ಕೊಡಬಹುದು. ಅಲ್ಲದೇ cybercrime.gov.in ಪೊರ್ಟಲ್ ಓಪನ್ ಮಾಡಿ ದೂರು ಸಲ್ಲಿಸಬಹುದು. ಸೈಬರ್ ಕ್ರೈಂಗೆ ಒಳಗಾದರೆ ಎಲ್ಲರೂ ಸಿಇಎನ್ ಪೊಲೀಸ್ ಠಾಣೆಗೇ ಹೋಗಿ ದೂರು ಕೊಡುವ ಅಗತ್ಯವಿಲ್ಲ. ಸ್ಥಳೀಯ ಯಾವುದೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಜಯಕುಮಾರ್.