ಬೆಂಗಳೂರು(ಡಿ.27): ಸರ್ಕಾರಿ ಕಾಮಗಾರಿ ಗುತ್ತಿಗೆ, ನಿಗಮ, ಮಂಡಳಿಯ ಅಧ್ಯಕ್ಷಗಿರಿ, ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿರುವ ಯುವರಾಜ್‌ನ ಬಗ್ಗೆ ಇನ್ನಷ್ಟು ತನಿಖೆ ತೀವ್ರಗೊಳಿಸಿರುವ ಸಿಸಿಬಿ, ಈಗ ಆತನ ಸ್ನೇಹ ವಲಯದಲ್ಲಿದ್ದ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್‌ ನೀಡಿ ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಯುವರಾಜ್‌ ಬಂಧನ ಬಳಿಕ ಆತನೊಂದಿಗೆ ನಿಕಟ ಸಂಪರ್ಕದಲ್ಲಿ ಏಳೆಂಟು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಆರೋಪಿ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಕೆಲವರ ಆತ್ಮೀಯ ಒಡನಾಟ ಕಂಡು ಬಂದಿದೆ. ಹೀಗಾಗಿ ಯುವರಾಜ್‌ ಜತೆ ಆರ್ಥಿಕ ವ್ಯವಹಾರ ಹೊಂದಿದ್ದವರಿಗೆ ಅಧಿಕೃತವಾಗಿ ನೋಟಿಸ್‌ ನೀಡಿ ವಿಚಾರಣೆಗೊಳಪಡಿಸಲು ನಿರ್ಧರಿಸಲಾಗಿದೆ. ಇನ್ನೆರೆಡು ದಿನಗಳಲ್ಲಿ ನೋಟಿಸ್‌ ಸಹ ಜಾರಿಗೊಳಿಸಲಾಗುತ್ತದೆ ಎಂದು ಸಿಸಿಬಿ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಇದುವರೆಗೆ ಅನ್ನಪೂರ್ಣೇಶ್ವರಿ ನಗರ, ಸದಾಶಿವನಗರ, ವಿಲ್ಸನ್‌ ಗಾರ್ಡನ್‌, ಹೈಗ್ರೌಂಡ್ಸ್‌ ಹಾಗೂ ಸೈಬರ್‌ ಠಾಣೆಗಳಲ್ಲಿ ಯುವರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ. ಆತನಿಂದ ಮೋಸಕ್ಕೊಳಗಾದವರು ಯಾವುದೇ ಭೀತಿಯಿಲ್ಲದೆ ದೂರು ನೀಡಬೇಕು ಎಂದು ಸಿಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಂಚನೆ ಕೇಸ್‌: ಸೇವಾಲಾಲ್‌ ಸ್ವಾಮಿ ವಿರುದ್ಧ ಮತ್ತೊಂದು FIR

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮುಖಂಡನ ಸೋಗಿನಲ್ಲಿ ಸರ್ಕಾರಿ ಉದ್ಯೋಗ, ನಿಗಮ-ಮಂಡಳಿ ಅಧ್ಯಕ್ಷ ಪದವಿ ಹಾಗೂ ಗುತ್ತಿಗೆ ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಕೊಡುವುದಾಗಿ ಹೇಳಿ ಹಲವು ಜನರಿಗೆ ಯುವರಾಜ್‌ ವಂಚಿಸಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಿದ ಸಿಸಿಬಿ, ಎರಡು ದಿನಗಳ ಹಿಂದೆ ರೇಂಜ್‌ ರೋವರ್‌ ಹಾಗೂ ಬೆಂಝ್‌ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗನಿಗೆ ಕೆಲಸ ಕೊಡಿಸಲು ಹೋಗಿ 30 ಲಕ್ಷ ರು. ಕಳೆದುಕೊಂಡರು

ಎಇಇ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 30 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಯುವರಾಜ್‌ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿ.ನರಸಿಂಹಸ್ವಾಮಿ ಎಂಬುವರೇ ವಂಚನೆಗೊಳಗಾಗಿದ್ದು, ತಮ್ಮ ಪುತ್ರನಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಹೋಗಿ ಯುವರಾಜ್‌ನ ಮೋಸದ ಬಲೆಗೆ ಅವರು ಬಿದ್ದಿದ್ದಾರೆ.

ತಮ್ಮ ಸ್ನೇಹಿತ ಲೋಕೇಶ್‌ ಮೂಲಕ ನರಸಿಂಹಸ್ವಾಮಿ ಅವರಿಗೆ ಯುವರಾಜ್‌ ಪರಿಚಯವಾಗಿದೆ. ಆಗ ಯುವರಾಜ್‌, ನನಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಮತ್ತು ಶಾಸಕರು ಗೊತ್ತು. ಅವರ ಮೂಲಕ ನಿಮ್ಮ ಮಗ ರವೀಂದ್ರನಿಗೆ ಎಇಇ ಹುದ್ದೆ ಕೊಡಿಸುತ್ತೇನೆ ಎಂದಿದ್ದ. ಇದಕ್ಕೆ 75 ಲಕ್ಷ ಬೇಡಿಕೆ ಇಟ್ಟಿದ್ದ. ಈ ಮಾತು ನಂಬಿದ ನರಸಿಂಹಸ್ವಾಮಿ ಅವರು, ಯುವರಾಜ್‌ಗೆ ಮುಂಗಡವಾಗಿ 30 ಲಕ್ಷ ರು. ಕೊಟ್ಟಿದ್ದರು. ಆದರೆ ಹಣ ಸಂದಾಯವಾದ ಬಳಿಕ ಆತ ವರ್ತನೆ ಬದಲಾಯಿತು. ಹಣ ಮರಳಿಸುವಂತೆ ಕೇಳಿದ್ದಕ್ಕೆ ರೌಡಿಗಳ ಮೂಲಕ ಬೆದರಿಕೆ ಹಾಕಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತರು ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.