ಹಾಥ್ರಸ್(ಡಿ.19)‌: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಹಾಥ್ರಸ್‌ ದಲಿತ ಯುವತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಸಲ್ಲಿಸಿದ್ದು, ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ತನ್ಮೂಲಕ ಈ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗಿದೆ ಎಂದು ಜೈಲಿನಿಂದಲೇ ಪತ್ರ ಬರೆದಿದ್ದ ನಾಲ್ವರೂ ಆರೋಪಿಗಳಿಗೆ ಹಿನ್ನಡೆಯಾಗಿದೆ.

ಮೇಲ್ವರ್ಗಕ್ಕೆ ಸೇರಿದ ಆರೋಪಿಗಳಾದ ಸಂದೀಪ್‌, ಲವಕುಶ, ರವಿ ಹಾಗೂ ರಾಮು ಎಂಬುವರ ವಿರುದ್ಧ ಸಿಬಿಐ ಎಸ್ಸಿ/ಎಸ್ಟಿದೌರ್ಜನ್ಯ ತಡೆ ಕಾಯ್ದೆಯಡಿಯೂ ಆರೋಪಗಳನ್ನು ಮಾಡಿದೆ ಎಂದು ವಕೀಲರು ತಿಳಿಸಿದ್ದಾರೆ.

ಸೆ.14ರಂದು 19 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಉತ್ತರಪ್ರದೇಶ ಬಳಿಕ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೆ.29ರಂದು ಆಕೆ ಮೃತಪಟ್ಟಿದ್ದಳು. ಸಂತ್ರಸ್ತೆಯ ಶವವನ್ನು ಸೆ.30ರ ರಾತ್ರಿ ಪೊಲೀಸರು ಆಕೆಯ ಮನೆಯ ಸಮೀಪವೇ ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ಸಂತ್ರಸ್ತೆಯ ತಾಯಿ ಹಾಗೂ ಸೋದರನೇ ಆಕೆಗೆ ಕಿರುಕುಳ ನೀಡುತ್ತಿದ್ದರು. ನಮ್ಮನ್ನು ಸಿಲುಕಿಸಲಾಗಿದೆ ಎಂದು ಆರೋಪಿಗಳು ಜೈಲಿನಿಂದ ಪತ್ರ ಬರೆದಿದ್ದರು. ಪ್ರಕರಣವನ್ನು ಉತ್ತರಪ್ರದೇಶದ ಪೊಲೀಸರು ನಿರ್ವಹಿಸಿದ ರೀತಿ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು.