ಬೆಂಗಳೂರು(ಸೆ.27): ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಫೈನಾನ್ಷಿಯರ್‌ ನವೀನ್‌ ಅಪಹರಣ ಪ್ರಕರಣ ಸಂಬಂಧ ‘ಬಿಗ್‌ ಬಾಸ್‌’ ಸ್ಪರ್ಧಿ ಸುನಾಮಿ ಕಿಟ್ಟಿಯ ಏಳು ಮಂದಿ ಸ್ನೇಹಿತರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಮಹೇಶ್‌, ಮೋಹನ್‌, ನವ್ಯಂತ್‌, ಭರತ್‌, ಜೋಸೆಫ್‌, ರವಿಕಿರಣ್‌ ಹಾಗೂ ರಾಜು ಬಂಧಿತರು. ಈ ಕೃತ್ಯದಲ್ಲಿ ಸುನಾಮಿ ಕಿಟ್ಟಿ ಹಾಗೂ ಸಂಘಟನೆಯೊಂದರ ಮುಖಂಡ ಮೂರ್ತಿ ಸೇರಿದಂತೆ ಮತ್ತಿತರರ ಪಾತ್ರದ ಬಗ್ಗೆ ತನಿಖೆ ನಡೆದಿದೆ. ಎಫ್‌ಐಆರ್‌ನಲ್ಲಿ ಕಿಟ್ಟಿ ಹೆಸರು ಪ್ರಸ್ತಾಪವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"

ಬಿಗ್ ಬಾಸ್ ಸ್ಟಾರ್ ಸುನಾಮಿ ಕಿಟ್ಟಿ ಮತ್ತೊಂದು ಅವಾಂತರ

ಮೂರು ದಿನಗಳ ಆರ್ಥಿಕ ವಿವಾದ ಹಿನ್ನೆಲೆಯಲ್ಲಿ ಜಯನಗರದ ಸಮೀಪ ಫೈನಾನ್ಷಿಯರ್‌ ನವೀನ್‌ನನ್ನು ಅಪಹರಿಸಿದ ಆರೋಪಿಗಳು, ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲದ ಪಟ್ಟಣದ ಲಾಡ್ಜ್‌ನಲ್ಲಿ ಬಂಧಿಸಿಟ್ಟಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಅನಿಲ್‌ ಕುಮಾರ್‌ ತಂಡ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣಕಾಸು ವಿಚಾರವಾಗಿ ನವೀನ್‌ ಮನೆ ಬಳಿ ಹೋಗಿ ಕಿಟ್ಟಿಹಾಗೂ ಮೂರ್ತಿ ಗಲಾಟೆ ಮಾಡಿದ್ದರು. ಆದರೆ ಅಪಹರಣ ವೇಳೆ ಅವರು ಕಾಣಿಸಿಕೊಂಡಿಲ್ಲ. ರೌಡಿ ಮೋಹನ್‌ನ ಸ್ನೇಹಿತರಾದ ವಿಶ್ವನಾಥ್‌ ಹಾಗೂ ಶಿವಕುಮಾರ್‌ ಅವರು, ತಮ್ಮ ಎರಡು ಕಾರುಗಳನ್ನು ನವೀನ್‌ ಬಳಿ ಅಡವಿಟ್ಟು ಸಾಲ ಪಡೆದಿದ್ದರು. ತರುವಾಯ ಈ ಕಾರುಗಳನ್ನು ನವೀನ್‌ ಮಾರಾಟ ಮಾಡಿದ್ದ. ಆದರೆ ನಾವು ಸಾಲ ಮರಳಿಸುತ್ತೇವೆ. ತಮ್ಮ ಕಾರು ಕೊಡುವಂತೆ ಆತನಿಗೆ ಕಾರಿನ ಮಾಲಿಕರು ಕೋರಿದ್ದರು. ಇದೇ ವಿಷಯವಾಗಿ ಭಿನ್ನಾಭಿಪ್ರಾಯವಾಗಿ ಕೊನೆಗೆ ಕಿಟ್ಟಿ ಗ್ಯಾಂಗ್‌ ಮಧ್ಯೆ ಪ್ರವೇಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.