ಬೆಂಗಳೂರು: ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಭೀಕರ ಕೊಲೆ!
ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾಲೇಜು ಉತ್ಸವದ (Bengaluru Reva college Fest) ವೇಳೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ವಿದ್ಯಾರ್ಥಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು (ಏ.29): ರಾಜ್ಯ ರಾಜಧಾನಿ ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾಲೇಜು ಉತ್ಸವದ (Bengaluru Reva college Fest) ವೇಳೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ವಿದ್ಯಾರ್ಥಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ರೇವಾ ಕಾಲೇಜು ಶ್ರೀಮಂತರ ಕಾಲೇಜು ಎಂದು ಕರೆಯಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಶಿಕ್ಷಣ, ಕ್ರೀಡೆ ಮತ್ತು ಮನೋರಂಜನೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಹೊಂದಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಯ ಹತ್ಯೆ ನಡೆದಿರುವ ವಿಚಾರ ವಿಷಾದನೀಯವಾಗಿದೆ. ಪ್ರತಿ ವರ್ಷದ ಆಚರಣೆಯಂತೆ ಕಾಲೇಜು ಫೆಸ್ಟ್ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ಫೆಸ್ಟ್ ಆಚರಣೆ ವೇಳೆ ಗಲಾಟೆ: ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ (ಏ.28ರಂದು) ವಿಜೃಂಭಣೆಯಿಂದ ಕಾಲೇಜು ಉತ್ಸವ ನಡೆಯುತ್ತಿತ್ತು. ಆದರೆ, ಕಾಲೇಜು ಫೆಸ್ಟ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರು ಮಾಡಿದ್ದ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಹೀಗೆ ತೀವ್ರ ವಿಕೋಪಕ್ಕೆ ತಿರುಗಿದ ಗಲಾಟೆಯಲ್ಲಿ ಓರ್ವ ಕಾಲೇಜು ವಿದ್ಯಾರ್ಥಿಯನ್ನು ಭೀಕರವಾಗಿ ವಿದ್ಯಾರ್ಥಿಗಳು ಕೊಲೆ ಮಾಡಿಬಿಟ್ಟಿದ್ದಾರೆ.
ಒಂದು ಗುಂಪಿನ ಯುವಕರಿಂದ ಚಾಕು ಇರಿತ: ಕಾಲೇಜಿನಲ್ಲಿ ಭೀಕರವಾಗಿ ಕೊಲೆಯಾದ ವಿದ್ಯಾರ್ಥಿಯನ್ನು ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಎಂದು ಗುರುತಿಸಲಾಗಿದೆ. ರೇವಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜು ಫೆಸ್ಟ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾದ ವೇಳೆ ಈ ವಿದ್ಯಾರ್ಥಿ ಕೂಡ ಒಂದು ಗುಂಪಿನಲ್ಲಿ ಭಾಗವಹಿಸಿದ್ದನು ಎಂದು ತಿಳಿದುಬಂದಿದೆ. ಗಲಾಟೆಯ ವೇಳೆ ಇನ್ನೊಂದು ಗುಂಪಿನ ವಿದ್ಯಾರ್ಥಿಗಳಿಂದ ಭಾಸ್ಕರ್ ಜೆಟ್ಟಿಗೆ ಚಾಕುವಿನಿಂದ ಇರಿಯಲಾಗಿದೆ. ಇನ್ನು ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕೆಲ ಅನುಮಾನಾಸ್ಪದ ಯುವಕರ ವಶ: ಗಲಾಟೆ ನಡೆದು ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲೇಜು ಫೆಸ್ಟ್ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ. ಇನ್ನು ಕೊಲೆಯ ಘಟನೆಯ ಬಗ್ಗೆ ಕಾಲೇಜು ಆವರಣದೊಳಗಿನ ಎಲ್ಲ ಸಿಸಿಟಿವಿ ಫೂಟೇಜ್‌ಗಳನ್ನು ಬಾಗಲೂರು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಈಗ ಅನುಮಾನಸ್ಪದ ಯುವಕರನ್ನ ವಶಕ್ಕೆ ಪಡೆದಿರುವ ಬಾಗಲೂರು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.