ಬೆಂಗಳೂರು[ಡಿ.01]: ‘ವಿಐಪಿ ಹನಿಟ್ರ್ಯಾಪ್‌’ ಬಲೆಯಲ್ಲಿ ಪಕ್ಷಾತೀತವಾಗಿ ಶಾಸಕರು ಸಿಲುಕಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಕರ್ನಾಟಕದ ಭಾಗದ ಆಡಳಿತಾರೂಢ ಪಕ್ಷದ ಶಾಸಕರೊಬ್ಬರ ವಿಡಿಯೋ ವೈರಲ್‌ ಆಗಿದೆ. ಆದರೆ ಸಂತ್ರಸ್ತರ ಪಟ್ಟಿಯಲ್ಲಿ ವಿಪಕ್ಷಗಳ ಶಾಸಕರೂ ಸಹ ಇದ್ದು, ಹನಿಟ್ರ್ಯಾಪ್‌ ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರನಿಂದ ಜಪ್ತಿಯಾದ ಪೆನ್‌ಡ್ರೈವ್‌ನಲ್ಲಿ ಪಕ್ಷಾತೀತವಾಗಿ ಶಾಸಕರ ಖಾಸಗಿ ವಿಡಿಯೋಗಳು ಸಿಕ್ಕಿವೆ ಎನ್ನಲಾಗಿದೆ.

ಹಲವು ದಿನಗಳಿಂದ ರಾಘವೇಂದ್ರ, ಸಂತ್ರಸ್ತ ಶಾಸಕರ ರಾಜಕೀಯ ವಿರೋಧಿಗಳನ್ನು ಸಂಪರ್ಕಿಸಿ ಡೀಲ್‌ ಕುದುರಿಸಿದ್ದ. ಆದರೆ ವಿಡಿಯೋಗಳಿಗೆ ದುಬಾರಿ ಬೆಲೆ ನಿಗದಿ ಮಾಡಿದ ಕಾರಣಕ್ಕೆ ಶಾಸಕರ ವಿರೋಧಿಗಳು ಆ ವಿಡಿಯೋಗಳ ಖರೀದಿಗೆ ಹಿಂದೇಟು ಹಾಕಿದ್ದರು. ಆದರೆ ಈಗ ಆ ವಿಡಿಯೋಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿವೆ. ಈ ಜಾಲದ ಬೇರು ಶೋಧನೆ ಮುಂದುವರೆಸಿದ ಪೊಲೀಸರು, ವಿಡಿಯೋ ಆಧರಿಸಿ ಸಂತ್ರಸ್ತ ಶಾಸಕರಿಂದ ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ವಿಚಾರಣೆಗೆ ಕರೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಹೀಗಾಗಿ ಮರ್ಯಾದೆಗೆ ಅಂಜಿ ತಾವು ಬ್ಲ್ಯಾಕ್‌ಮೇಲ್‌ ಬಗ್ಗೆ ದೂರು ಕೊಡದೆ ಹೋದರೂ ಸಿಸಿಬಿ ತನಿಖೆಗೊಳಗಾಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಂತ್ರಸ್ತ ಶಾಸಕರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ವಿಡಿಯೋ ರವಾನೆ:

ಇನ್ನು ಹನಿಟ್ರ್ಯಾಪ್‌ ದಂಧೆಕೋರ ರಾಘವೇಂದ್ರನಿಂದ ವಶಪಡಿಸಿಕೊಳ್ಳಲಾಗಿರುವ ಹಾರ್ಡ್‌ ಡಿಸ್ಕ್‌ ಹಾಗೂ ಪೆನ್‌ ಡ್ರೈವ್‌ಗಳನ್ನು ತಪಾಸಣೆ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಸಿಬಿ ಪೊಲೀಸರು ರವಾನಿಸಿದ್ದಾರೆ. ದಾವಣೆಗೆರೆ ಹಾಗೂ ಬೆಂಗಳೂರಿನಲ್ಲಿರುವ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದರು.

ಸಭೆ ನಡೆಸಿದ ಆಯುಕ್ತ:

ಹನಿಟ್ರ್ಯಾಪ್‌ ಜಾಲದ ಕುರಿತು ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಆಯುಕ್ತ ಭಾಸ್ಕರ್‌ ರಾವ್‌ ಅವರು ಸಿಸಿಬಿ ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತು ಶನಿವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಹನಿಟ್ರ್ಯಾಪ್‌ ಕೃತ್ಯದ ವಿಡಿಯೋಗಳು ಬಹಿರಂಗವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ ಆಯುಕ್ತರು, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸಭೆಯಲ್ಲಿ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌, ಡಿಸಿಪಿಗಳಾದ ಕುಲದೀಪ್‌ ಕುಮಾರ್‌ ಜೈನ್‌ ಹಾಗೂ ಕೆ.ಪಿ.ರವಿಕುಮಾರ್‌ ಇದ್ದರು.

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: