ಬಿಜೆಪಿ ಮುಖಂಡನ ಬರ್ಬರ ಹತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷೆ, ಸಿಎಂ ಬೊಮ್ಮಾಯಿ
ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ: ಸಿಎಂ ಬೊಮ್ಮಾಯಿ
ಬೆಂಗಳೂರು(ಜು.27): ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಸಿಎಂ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ ಅಂತ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರ ಹತ್ಯೆ, ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಘ್ನ!
ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರ ಹತ್ಯೆ
ಮಂಗಳೂರು: ಬಿಜೆಪಿ ಯುವ ಮುಖಂಡನೊಬ್ಬನನ್ನು ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ಜಿಲ್ಲೆ ಉದ್ವಿಗ್ನಗೊಂಡಿದೆ. ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಮುಖಂಡನೂ ಆಗಿರುವ ಪ್ರವೀಣ್ ನೆಟ್ಟಾರು ಮೃತಪಟ್ಟವರು. ಕೆಲ ದಿನಗಳ ಹಿಂದಷ್ಟೇ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಯುವಕನೊಬ್ಬನ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ಆಮಾಯಕನ ಕೊಲೆಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ಮೊದಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರವೀಣ್ ನೆಟ್ಟಾರು ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದ.ಕ. ಎಸ್ಪಿ ಋುಷಿಕೇಶ್ ಸೋನಾವಣೆ ಮಂಗಳವಾರ ರಾತ್ರಿ ಭೇಟಿ ನೀಡಿದರು. ದುರ್ಘಟನೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಮತ್ತು ಕೇರಳ ಗಡಿ ಭಾಗಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಈ ಪರಿಸರದಲ್ಲಿ ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ವಿವರ:
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿಗೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿದ್ದ ಮಸೂದ್ ಎಂಬ ಯುವಕ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳು ಬಂಧಿಸಲ್ಪಟ್ಟಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಪ್ರತೀಕಾರ ಎಂಬ ಶಂಕೆ ಮೂಡಿದೆ.