ಬೆಂಗಳೂರು(ಜೂ.21): ಕೊರೋನಾ ಸಾಂಸ್ಥಿಕ (ಸರ್ಕಾರಿ) ಕ್ವಾರಂಟೈನ್‌ನಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಒಳಾಂಗಣ ವಿನ್ಯಾಸಕಾರನೊಬ್ಬನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ಜೈಶಂಕರ್‌ ಬಂಧಿತನಾಗಿದ್ದು, ಮುಂಬೈನಿಂದ ಮರಳಿದ ಕಾರಣ ಸಂತ್ರಸ್ತೆಯರ ಜತೆ ಅದೇ ಕಟ್ಟಡದಲ್ಲಿ ಆತ ಸಹ ಕ್ವಾರಂಟೈನ್‌ಗೊಳಗಾಗಿದ್ದ. ಯುವತಿಯರ ಮೇಲೆ ಗುರುವಾರ ಆರೋಪಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಾಮಪುರದಲ್ಲಿ ನೆಲೆಸಿದ್ದ ಜೈಶಂಕರ್‌ ಎಂಬಾತ, ಯುವತಿಯ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಆಗ ರಕ್ಷಣೆಗೆ ಕೂಗಿಕೊಂಡಾಗ ಆಕೆಯನ್ನು ಕ್ವಾರಂಟೈನ್‌ನಲ್ಲಿ ಜನರು ಕಾಪಾಡಿದ್ದಾರೆ. ಬಳಿಕ ಕೊಠಡಿಗೆ ತೆರಳಿ ಸ್ನೇಹಿತೆ ಮುಂದೆ ಅಳಲು ತೋಡಿಕೊಂಡಾಗ ಆಕೆ ಮೇಲೂ ಅತ್ಯಾಚಾರ ಯತ್ನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯರು, ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಗೆ ದೂರು ನೀಡಿದರು. ಅದರನ್ವಯ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.