ಬೆಂಗಳೂರು(ಜು.05): ಹುಟ್ಟುಹಬ್ಬದ ಸಂಭ್ರಮದ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ ನಟಿಯೊಬ್ಬರ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿರುವ ಪ್ರಕರಣವೊಂದು ರಾಜಧಾನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

"

ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಾ ಆರೋಪಿ ಲಕ್ಷಾಂತರ ರುಪಾಯಿ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಿ ಜಗಜೀವನ್‌ರಾಮ್‌ ನಗರ ಠಾಣೆಗೆ ಇದೀಗ ಸಂತ್ರಸ್ತೆ ದೂರು ನೀಡಿದ್ದಾರೆ.

30 ವರ್ಷದ ನಟಿ ಕೊಟ್ಟದೂರಿನ ಮೇರೆಗೆ ನಾಯಂಡಹಳ್ಳಿ ನಿವಾಸಿ ಮೋಹಿತ್‌ ಮತ್ತು ಆತನ ಪೋಷಕರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾಜಿ ಪ್ರೇಯಸಿಯ ಪತಿಗೆ ನಗ್ನ ವಿಡಿಯೋ ಕಳಿಸಿದ!

ಹಲವು ಸಿನಿಮಾಗಳಲ್ಲಿ ನಟಿಸಿದ ನಟಿ:

ಸಂತ್ರಸ್ತೆ ನಟಿ ಕನ್ನಡ ಚಿತ್ರರಂಗದಲ್ಲಿ 2014ರಿಂದ ಸಕ್ರಿಯವಾಗಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಚಿತ್ರವೊಂದರಲ್ಲೂ ಕೂಡ ನಟಿಸಿದ್ದಾರೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ನಟಿ ಗಾಂಧಿ ಬಜಾರ್‌ನಲ್ಲಿ ಕಾಫಿ ಡೇಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಆರೋಪಿ ನೀವು ನಟಿಯಲ್ಲವೇ ಎಂದು ಪರಿಚಯಿಸಿಕೊಂಡು, ನಾನು ಮೆಕಾಫ್ಲೈ ಕಂಪನಿಯ ಸಿಇಒ ಎಂದು ಹೇಳಿಕೊಂಡಿದ್ದ. ಇಬ್ಬರೂ ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.

ನಂತರ ನಟಿ ಹಾಗೂ ಆರೋಪಿ ನಡುವೆ ಉತ್ತಮ ಸ್ನೇಹವಿತ್ತು. ಆರೋಪಿ ತಮ್ಮ ಕಂಪನಿಗೆ ರಾಯಭಾರಿ ಆಗುವಂತೆ ನಟಿಯನ್ನು ಕೇಳಿದ್ದ. ಇದಕ್ಕೆ ನಟಿ ಒಪ್ಪಿ ಆರೋಪಿ ಕಂಪನಿಗೆ ರಾಯಭಾರಿಯಾಗಿದ್ದರು. 2019ರ ಜ.15ರಂದು ಆರೋಪಿ, ನಟಿಯನ್ನು ಗೋವಾಗೆ ಕರೆದೊಯ್ದು ಫೋಟೋ ಶೂಟ್‌ ಕೂಡ ಮಾಡಿಸಿದ್ದ. ರಾಯಭಾರಿಯಾದರೂ ಆರೋಪಿ ನಟಿಗೆ ಯಾವುದೇ ಹಣ ನೀಡಿರಲಿಲ್ಲ. ಬದಲಾಗಿ ಕಂಪನಿ ಆರ್ಥಿಕ ಸಮಸ್ಯೆಯಲ್ಲಿದೆ ಎಂದು ಹೇಳಿ ಆಕೆ ಬಳಿಯೇ ಒಂದೂವರೆ ಲಕ್ಷ ಸಾಲ ಪಡೆದಿದ್ದ. 2019ರ ಜೂ.22ರಂದು ಮೋಹಿತ್‌ ಹುಟ್ಟುಹಬ್ಬವನ್ನು ನಟಿ ಮನೆಯಲ್ಲಿಯೇ ಆಚರಿಸಿಕೊಂಡಿದ್ದ.

ತಮಿಳುನಾಡಲ್ಲಿ ಪೊಲೀಸ್ ಕ್ರೌರ್ಯಕ್ಕೆ ಮತ್ತೊಂದು ಬಲಿ: ಆಟೋ ಚಾಲಕನ ದೇಹದ ಭಾಗಗಳು ಪುಡಿ-ಪುಡಿ!

ಹುಟ್ಟುಹಬ್ಬದ ದಿನವೇ ಅತ್ಯಾಚಾರ:

ಇದಾದ ಮರುದಿನ ಸಂತ್ರಸ್ತೆಯ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈ ವೇಳೆ ಮೋಹಿತ್‌ ತಾನು ತಂದಿದ್ದ ತಂಪು ಪಾನೀಯವನ್ನು ಸಂತ್ರಸ್ತೆಗೆ ಕುಡಿಸಿದ್ದ. ಸ್ವಲ್ಪ ಹೊತ್ತಿಗೆ ಸಂತ್ರಸ್ತೆ ತಲೆ ಸುತ್ತುತ್ತಿದೆ ಎಂದು ಕೊಠಡಿಗೆ ಹೋಗಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನಟಿ ಮೇಲೆ ಆರೋಪಿ ಮೋಹಿತ್‌ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು, ನಾನು ಕೇಳಿದಾಗಲೆಲ್ಲ ಹಣ ಕೊಡದಿದ್ದರೆ ನಿನ್ನೊಂದಿಗೆ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇನೆ ಎಂದು ಬೆದರಿಕೆ ಒಡ್ಡಿ ಹಂತ-ಹಂತವಾಗಿ ನಟಿ ಬಳಿ ಸುಮಾರು . 20 ಲಕ್ಷ ಸುಲಿಗೆ ಮಾಡಿದ್ದಾನೆ. ನಂತರ ಮತ್ತೊಮ್ಮೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

16ರ ಬಾಲಕಿಗೆ ಲವ್ ‌ಲೆಟರ್‌ ಕೊಟ್ಟ 66ರ ವೃದ್ಧ ಅರೆಸ್ಟ್‌!

ಆರೋಪಿ ಹಾಗೂ ಆತನ ಪೋಷಕರು ತಲೆಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ಅತ್ಯಾಚಾರ, ಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯೆ ಕೇಳಲು ‘ಕನ್ನಡಪ್ರಭ’ ಸಂತ್ರಸ್ತೆ ನಟಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.