ಭಾರತದಲ್ಲಿ ನಿತ್ಯ 77 ರೇಪ್, 80 ಕೊಲೆ!
* 2020ರ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ ಬಿಡುಗಡೆ
* ಭಾರತದಲ್ಲಿ ನಿತ್ಯ 77 ರೇಪ್, 80 ಕೊಲೆ!
* ವರದಕ್ಷಿಣೆ ಕಿರುಕುಳಕ್ಕೆ 6,966 ಮಹಿಳೆಯರ ಸಾವು
* ಅತ್ಯಾಚಾರದಲ್ಲಿ ರಾಜಸ್ಥಾನ ನಂ.1, ಕರ್ನಾಟಕ ನಂ.14
* ಕೊಲೆಯಲ್ಲಿ ಉ.ಪ್ರ. ನಂ.1, ಕರ್ನಾಟಕ ನಂ.10
ನವದೆಹಲಿ(ಸೆ.16): 2020ರಲ್ಲಿ ದೇಶಾದ್ಯಂತ ಕೊರೋನಾ ಹಾವಳಿ, ಲಾಕ್ಡೌನ್ ಇದ್ದ ಹೊರತಾಗಿಯೂ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಟ್ಟಾರೆ ಕೊಲೆ ಪ್ರಕರಣಗಳಲ್ಲಿ ಭಾರಿ ಇಳಿಕೆಯೇನೂ ಕಂಡುಬಂದಿಲ್ಲ. ಕಳೆದ ವರ್ಷ ದೇಶದಲ್ಲಿ ನಿತ್ಯ ಸರಾಸರಿ 77 ಅತ್ಯಾಚಾರ ಮತ್ತು 80 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿ ಹೇಳಿದೆ.
ಕರ್ಟೈನ್ ಸುತ್ತಿಸಿ ಪರೀಕ್ಷೆ ಬರೆಸಿದ್ರು..! ಶಾರ್ಟ್ಸ್ ಧರಿಸಿದ್ರೇನು ತಪ್ಪು ?
ಇನ್ನು ಅತಿ ಹೆಚ್ಚು ಅತ್ಯಾಚಾರ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 14ನೇ ಸ್ಥಾನ ಮತ್ತು ಅತಿ ಹೆಚ್ಚು ಕೊಲೆ ನಡೆದ ರಾಜ್ಯಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಅತಿ ಹೆಚ್ಚು ಅತ್ಯಾಚಾರ ನಡೆದ ಟಾಪ್ 3 ರಾಜ್ಯಗಳೆಂಬ ಕುಖ್ಯಾತಿ ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶದ ಪಾಲಾಗಿದ್ದರೆ, ಅತಿ ಹೆಚ್ಚು ಹತ್ಯೆ ನಡೆದ ಟಾಪ್ 3 ರಾಜ್ಯಗಳೆಂಬ ಕುಖ್ಯಾತಿ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರದ ಪಾಲಾಗಿದೆ.
28 ಸಾವಿರಕ್ಕೂ ಹೆಚ್ಚು ಅತ್ಯಾಚಾರ:
ರಾಷ್ಟ್ರೀಯ ಅಪರಾಧ ಬ್ಯೂರೋ ಬುಧವಾರ ಬಿಡುಗಡೆ ಮಾಡಿರುವ ವರದಿ ಅನ್ವಯ, ನಿತ್ಯ ಸರಾಸರಿ 77ರಂತೆ 2020ರಲ್ಲಿ ದೇಶದಲ್ಲಿ 28153 ಮಹಿಳೆಯರ ಮೇಲೆ 28,046 ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಪೈಕಿ 25498 ವಯಸ್ಕ ಮತ್ತು 2655 ಅಪ್ರಾಪ್ತ ಸಂತ್ರಸ್ತರು. ದೇಶದಲ್ಲಿ 2017ರಲ್ಲಿ 32559, 2018ರಲ್ಲಿ 33356, 2019ರಲ್ಲಿ 32033 ರೇಪ್ ಪ್ರಕರಣ ದಾಖಲಾಗಿದ್ದವು ಎಂದು ವರದಿ ಹೇಳಿದೆ.
ರಾಜಸ್ಥಾನದಲ್ಲಿ 5310, ಉತ್ತರಪ್ರದೇಶದಲ್ಲಿ 2769, ಮಧ್ಯಪ್ರದೇಶದಲ್ಲಿ 2339 ರೇಪ್ ನಡೆದಿದ್ದು, ಟಾಪ್ 3 ರಾಜ್ಯಗಳೆನಿಸಿವೆ. ಇನ್ನು ಕರ್ನಾಟಕದಲ್ಲಿ 504 ಪ್ರಕರಣಗಳು ದಾಖಲಾಗಿದ್ದು, 14ನೇ ಸ್ಥಾನದಲ್ಲಿದೆ ಎಂದು ಎನ್‌ಸಿಆರ್‌ಬಿ ಹೇಳಿದೆ.
ಉಳಿದಂತೆ ಕಳೆದ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯದ 3.71 ಲಕ್ಷ ಕೇಸು ದಾಖಲಾಗಿದ್ದವು. ಇದು ಹಿಂದಿನ ವರ್ಷದ ಪ್ರಮಾಣವಾದ 4.05 ಲಕ್ಷಕ್ಕಿಂತ ಕಡಿಮೆ. ಇನ್ನು 2020ರಲ್ಲಿ ವರದಕ್ಷಿಣೆ ಕಿರುಕುಳಕ್ಕೆ 6966 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಮಗನನ್ನು ಪೊಲೀಸ್ ಕೊಂದರೂ ದುಃಖವಿಲ್ಲ; ಸಕಿನಕಾ ಅತ್ಯಾಚಾರ ಆರೋಪಿ ತಂದೆಯ ಕಣ್ಣೀರು!
29 ಸಾವಿರಕ್ಕೂ ಹೆಚ್ಚು ಕೊಲೆ:
ನಿತ್ಯ ಸರಾಸರಿ 80ರಂತೆ 2020ರಲ್ಲಿ 29193 ಕೊಲೆ ಪ್ರಕರಣಗಳು ದೇಶದಲ್ಲಿ ನಡೆದಿವೆ. 2019ರಲ್ಲಿ 28915 ಕೊಲೆ ನಡೆದಿತ್ತು. ಬಿಹಾರ (3150), ಮಹಾರಾಷ್ಟ್ರ(2163), ಮಧ್ಯ ಪ್ರದೇಶ(2101) ಅತಿ ಹೆಚ್ಚು ಕೊಲೆ ನಡೆದ ಟಾಪ್ 3 ರಾಜ್ಯಗಳಾಗಿವೆ. ಕರ್ನಾಟಕ 1331 ಪ್ರಕರಣಗಳೊಂದಿಗೆ 10ನೇ ಸ್ಥಾನದಲ್ಲಿದೆ. ಕೊಲೆಯಾದವರಲ್ಲಿ ಶೇ.39ರಷ್ಟುಜನ 30-45 ವರ್ಷ ವಯಸ್ಸಿನವರು, ಶೇ.16ರಷ್ಟು45-60 ವಯಸ್ಸಿನವರು, ಶೇ.4ರಷ್ಟು60 ವರ್ಷ ಮೇಲ್ಪಟ್ಟವರು. ಇನ್ನು 2019ರಲ್ಲಿ 1.05 ಲಕ್ಷ ಅಪಹರಣ ನಡೆದಿದ್ದರೆ, 2020ರಲ್ಲಿ ಅದು 84000ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಅತ್ಯಾಚಾರ: ಟಾಪ್ 3 ರಾಜ್ಯಗಳು
* ರಾಜಸ್ಥಾನ 5,310
* ಉತ್ತರಪ್ರದೇಶ 2,769
* ಮಧ್ಯಪ್ರದೇಶ 2,339
* ದೇಶದಲ್ಲಿ ಒಟ್ಟು 28,046
ಹತ್ಯೆ: ಟಾಪ್ 3 ರಾಜ್ಯಗಳು
* ಉತ್ತರ ಪ್ರದೇಶ 3,779
* ಬಿಹಾರ ,3150
* ಮಹಾರಾಷ್ಟ್ರ 2,163
* ದೇಶದಲ್ಲಿ ಒಟ್ಟು 29,193