ನವದೆಹಲಿ(ಆ.07): ನಿರ್ಭಯಾ ಗ್ಯಾಂಗ್‌ರೇಪ್‌ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೆಲವೇ ತಿಂಗಳಲ್ಲಿ ದಿಲ್ಲಿಯಲ್ಲಿ ಮತ್ತೊಂದು ಬೀಭತ್ಸ ಅತ್ಯಾಚಾರ ನಡೆದಿದೆ. ಈ ಬಾರಿ 12 ವರ್ಷದ ಬಾಲಕಿಯ ಮೇಲೆ ದುರುಳರು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.

ಮಂಗಳವಾರವೇ ಈ ಘಟನೆ ನಡೆದಿದ್ದು, ಬಾಲಕಿಯನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಆಕೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾಳೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದರೆ, ಸ್ಥಿತಿ ಗಂಭೀರವಾಗಿದೆ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಹೇಳಿದ್ದಾರೆ.

ಈ ನಡುವೆ, ‘ಈ ಘಟನೆ ನನ್ನ ಆತ್ಮವನ್ನೇ ನಡುಗಿಸಿದೆ. ಉತ್ತಮ ವಕೀಲರನ್ನು ನೇಮಿಸಿ ದುರುಳರಿಗೆ ಗಲ್ಲು ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುವುದು. ಬಾಲಕಿ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡಲಾಗುವುದು’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಗಲ್ಲು ಸಜೆಗೆ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಹಾಗೂ ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದ್ದಾರೆ.

ಆಗಿದ್ದೇನು?:

ದಿಲ್ಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ಬಾಲಕಿ ಮನೆ ಇದೆ. ಮನೆಯಲ್ಲಿ ಬಾಲಕಿಯ ತಂದೆ-ತಾಯಿ ಇಲ್ಲದ್ದನ್ನು ಗಮನಿಸಿದ ದುರುಳರು, ಇದೇ ಸಮಯ ಸಾಧಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆಯ ದೇಹದ ಪ್ರತಿ ಭಾಗದ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಮೈಮೇಲೆ ಕಚ್ಚಿದ್ದಾರೆ. ತಲೆಗೆ ಹಾಗೂ ಮುಖಕ್ಕೆ ಹರಿತವಾದ ವಸ್ತು ಬಳಸಿ ಗಾಯಗೊಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಘಟನೆ ಬಳಿಕ ಈಕೆಯನ್ನು ರಕ್ತದ ಮಡುವಿನಲ್ಲಿ ಬಿದ್ದುದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಅಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ.

ಕೊರೋನಾ ಸೋಂಕು ತಗುಲಿದ್ದಕ್ಕೆ ಬೇಸರ: ಆತ್ಮಹತ್ಯೆಗೆ ಶರಣಾದ ಪೌರಕಾರ್ಮಿಕ

ಪೊಲೀಸರು ಅಕ್ಕಪಕ್ಕದ ಮನೆಯವರ ಹೇಳಿಕೆ ಪಡೆದಿದ್ದು, ಸಿಸಿಟೀವಿ ಗಮನಿಸುತ್ತಿದ್ದಾರೆ. ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ‘ಆದರೆ ಘಟನೆ ನಡೆದು 2 ದಿನ ಆದರೂ ಬಂಧನ ಆಗಿಲ್ಲವೇಕೆ’ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರು, ಪೊಲೀಸರನ್ನು ಪ್ರಶ್ನಿಸಿದ್ದಾರೆ.