ಬೆಂಗಳೂರು(ಏ.27): ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ತನ್ನ ಮನೆಗೆ ಕರೆತಂದು ಲೈಂಗಿಕವಾಗಿ ಬಳಸಿಕೊಂಡಿದ್ದ ಪ್ರಿಯಕರ ನಂತರ ಆಕೆಯ ಕೊಲೆಗೆ ಯತ್ನಿಸಿರುವ ಪ್ರಕರಣ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರತ್ತಹಳ್ಳಿ ನಿವಾಸಿ 29 ವರ್ಷದ ಸಂತ್ರಸ್ತ ಯುವತಿ ಕೊಟ್ಟದೂರಿನ ಮೇರೆಗೆ ಸಂಜಯನಗರ ನಿವಾಸಿ ಅರ್ಕ್ ಬಕ್ಷಿ ಎಂಬಾತನ ವಿರುದ್ಧ ಅತ್ಯಾಚಾರ, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ದಂಪತಿಗಳನ್ನು ಒಂದು ಮಾಡಲು ಬಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಎನ್‌ಜಿಒ ಕಂಪನಿಯೊಂದರಲ್ಲಿ ಯುವತಿ ಉದ್ಯೋಗಿಯಾಗಿದ್ದು, ತಾನು ವಾಸವಿದ್ದ ಮನೆಯ ಸಮೀಪದಲ್ಲೇ ನೆಲೆಸಿದ್ದ ಅರ್ಕ್ ಬಕ್ಷಿನ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿತ್ತು. ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿ ಸಂಜಯನಗರಕ್ಕೆ ಸ್ಥಳಾಂತರವಾಗಿದ್ದ ಕಾರಣ ಆತ ಕೂಡ ಮನೆಯನ್ನು ಸ್ಥಳಾಂತರ ಮಾಡಿದ್ದ. ಯುವತಿಯನ್ನು ಆಗಾಗ್ಗೆ ಭೇಟಿ ನೆಪದಲ್ಲಿ ಮನೆಗೆ ಕರೆಯಿಸಿಕೊಂಡ ಲೈಂಗಿಕವಾಗಿ ಬಳಸಿಕೊಂಡಿದ್ದ. ಪ್ರೇಮಿಗಳ ದಿನವಾದ ಫೆ.14ರಂದು ಕಾಡು ಬೀಸನಹಳ್ಳಿಯಲ್ಲಿರುವ ಪಬ್‌ಗೆ ಕರೆದೊಯ್ದಿದ್ದ. ಈ ವೇಳೆ ಸ್ನೇಹಿತರಿಗೆ ಯುವತಿಯನ್ನು ಪರಿಚಯಿಸಿ, ಸ್ನೇಹಿತರ ಮುಂದೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಕೈ ಬೆರಳಿಗೆ ಉಂಗುರು ಹಾಕಿದ್ದ.

ನಂತರ ಇಬ್ಬರೂ ಸಂಜಯನಗರದಲ್ಲೇ ಕೆಲಸ ಮಾಡೋಣ ಎಂದು ಪುಸಲಾಯಿಸಿ ಯುವತಿಯನ್ನು ಮಾರತ್ತಹಳ್ಳಿಯಿಂದ ತಾನು ನೆಲೆಸಿದ್ದ ಸಂಜಯನಗರದ ಮನೆಗೆ ಕರೆಸಿಕೊಂಡಿದ್ದ. ಇಬ್ಬರೂ ಒಟ್ಟಾಗಿಯೇ ನೆಲೆಸಿದ್ದರು. ಈ ವಿಚಾರ ಆರೋಪಿಯ ಪೋಷಕರಿಗೆ ಗೊತ್ತಾಗಿದೆ. ತನ್ನ ಪುತ್ರನ ಸಂಬಂಧ ಬೆಳೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಸಂತ್ರಸ್ತೆಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ತಮ್ಮ ಪುತ್ರನಿಗೂ ಕರೆ ಮಾಡಿ, ಯುವತಿಯನ್ನು ಬಿಟ್ಟುಬಿಡು, ಇಲ್ಲವಾದರೆ ನಿನ್ನನ್ನು ಮನೆಗೆ ಸೇರಿಸುವುದಿಲ್ಲ ಎಂದು ಬೆದರಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ: ಮಗ, ಅಳಿಯ ಸೇರಿ ಮೂವರು ಅರೆಸ್ಟ್‌

ಪೋಷಕರ ಬೆದರಿಕೆಯಿಂದ ತಬ್ಬಿಬ್ಬಾದ ಬಕ್ಷಿ, ಏ.23ರಂದು ತನ್ನ ಪ್ರೇಯಸಿ ಜತೆ ಜಗಳವಾಡಿದ್ದು, ಮನೆ ಬಿಟ್ಟು ಹೋಗುವಂತೆ ಆಗ್ರಹಿಸಿದ್ದ. ಇದಕ್ಕೆ ನಿರಾಕರಿಸಿದಾಗ, ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಹತ್ಯೆಗೆ ಯತ್ನಿಸಿದ್ದ ಎಂದು ಆರೋಪಿಸಿ ಯುವತಿ ದೂರು ಕೊಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.