Bengaluru: ಚೆನ್ನಾಗಿ ಅಡುಗೆ ಮಾಡ್ತಾನೆಂದು ಪ್ರತಿಸ್ಫರ್ಧಿಯ ಹತ್ಯೆ: ಆರೋಪಿಗಳ ಬಂಧನ
ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಅಡುಗೆ ಬಾಣಸಿಗನನ್ನು ಹತ್ಯೆ ಮಾಡಿದ್ದ ಮೃತನ ಮೂವರು ಸ್ನೇಹಿತರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಿದರಕಲ್ಲು ನಿವಾಸಿಗಳಾದ ಸತೀಶ, ದೇವರಾಜ ಹಾಗೂ ಶಿವಕುಮಾರ ಅಲಿಯಾಸ್ ಪುಟ್ಟ ಬಂಧಿತರು.
ಬೆಂಗಳೂರು (ಜು.09): ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಅಡುಗೆ ಬಾಣಸಿಗನನ್ನು ಹತ್ಯೆ ಮಾಡಿದ್ದ ಮೃತನ ಮೂವರು ಸ್ನೇಹಿತರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಿದರಕಲ್ಲು ನಿವಾಸಿಗಳಾದ ಸತೀಶ, ದೇವರಾಜ ಹಾಗೂ ಶಿವಕುಮಾರ ಅಲಿಯಾಸ್ ಪುಟ್ಟ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ವೃತ್ತಿ ವೈಷಮ ಹಿನ್ನೆಲೆಯಲ್ಲಿ ತಮ್ಮ ಗೆಳೆಯ ಆನಂದ (38)ನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಡುಗೆ ಗುತ್ತಿಗೆ ಗಲಾಟೆ: ತನ್ನ ಪತ್ನಿ ಜತೆ ಸುಂಕದಟ್ಟೆಯಲ್ಲಿ ನೆಲೆಸಿದ್ದ ಚಾಮರಾಜನಗರ ಜಿಲ್ಲೆಯ ಆನಂದ್, ನಗರದಲ್ಲಿ ಅಡುಗೆ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ಮೊದಲು ಅಡುಗೆ ಬಾಣಸಿಗ ಸತೀಶ್ ಬಳಿ ಆನಂದ್ ಸಹಾಯಕನಾಗಿದ್ದ. ಆದರೆ ಇತ್ತೀಚೆಗೆ ಸತೀಶ್ ಬಳಿ ಕೆಲಸ ತೊರೆದು ಆತ, ಸ್ವಂತ ತಂಡ ಕಟ್ಟಿಕೊಂಡು ಅಡುಗೆ ಕೆಲಸ ಮಾಡುತ್ತಿದ್ದ. ಮೃತ ಆನಂದ್ ರುಚಿಯಾದ ಅಡುಗೆ ತಯಾರಿಸುತ್ತಿದ್ದ. ಹೀಗಾಗಿ ಆತನ ಕೈ ರುಚಿಗೆ ಜನರು ಮರುಳಾಗಿದ್ದರು. ಇದರ ಪರಿಣಾಮ ಮದುವೆ, ನಾಮಕರಣ ಹಾಗೂ ಗೃಹ ಪ್ರವೇಶ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಅಡುಗೆ ತಯಾರಿಸಲು ಆತನಿಗೆ ಹೆಚ್ಚು ಅವಕಾಶಗಳು ಸಿಗುತ್ತಿದ್ದವು.
ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯ ಬರ್ಬರ ಹತ್ಯೆ: ಕೊಲೆಯ ರಹಸ್ಯ ಬಯಲು
ಇತ್ತ ಆನಂದ್ ತಂಡ ತೊರೆದ ಬಳಿಕ ಸತೀಶ್ ವ್ಯವಹಾರದಲ್ಲಿ ಭಾರಿ ನಷ್ಟಉಂಟಾಗಿತ್ತು. ಆತನಿಗೆ ಕ್ಯಾಂಟರಿಂಗ್ ಸೇವೆ ಗುತ್ತಿಗೆಗಳು ಕೂಡಾ ವಿರಳವಾಗಿದ್ದವು. ತನ್ನ ಅಡುಗೆ ವ್ಯವಹಾರದ ನಷ್ಟಕ್ಕೆ ಆನಂದ್ ಕಾರಣ ಎಂದು ಭಾವಿಸಿ ಗೆಳೆಯನ ಮೇಲೆ ಸತೀಶ್ ಹೆಗತನ ಶುರುವಾಗಿತ್ತು. ಈ ವೈಷಮ್ಯ ಹಿನ್ನೆಲೆಯಲ್ಲಿ ಆನಂದ್ ಹತ್ಯೆಗೆ ಆತ ನಿರ್ಧರಿಸಿದ್ದ. ಈ ಕೃತ್ಯಕ್ಕೆ ಮತ್ತಿಬ್ಬರು ಬಾಣಸಿಗರಾದ ಶಿವಕುಮಾರ್ ಹಾಗೂ ದೇವರಾಜ್ ಸಾಥ್ ಕೊಟ್ಟಿದ್ದರು. ಅಂತೆಯೇ ಮದ್ಯ ಸೇವನೆ ನೆಪದಲ್ಲಿ ಪೀಣ್ಯ ಸಮೀಪದ ಚನ್ನನಾಯಕನಹಳ್ಳಿಗೆ ಜು.1ರಂದು ರಾತ್ರಿ ಆನಂದ್‌ನನ್ನು ಸತೀಶ್ ಹಾಗೂ ಆತನ ಸಹಚರರು ಕರೆಸಿಕೊಂಡಿದ್ದರು.
ಆಗ ಕಂಠಮಟ್ಟ ಮದ್ಯ ಸೇವಿಸಿದ್ದ ಸ್ನೇಹಿತರಲ್ಲಿ ಅಡುಗೆ ಕಂಟ್ರಾಕ್ಟರ್ ವಿಚಾರ ಪ್ರಸ್ತಾಪವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆನಂದ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿಗಳು ಹತ್ಯೆಗೈದಿದ್ದರು. ಮೃತದೇಹದ ಗುರುತು ಸಿಗದ ಬಾರದು ಎಂದು ಡೀಸೆಲ್ ಸುರಿದು ಸುಟ್ಟು ಹಾಕಲು ಯತ್ನಿಸಿ ಪರಾರಿಯಾಗಿದ್ದರು. ಮರುದಿನ ಅರೆಬೆಂದ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ತವರು ಮನೆಗೆ ಹೋಗಿದ್ದ ಆನಂದ್ ಪತ್ನಿ ನಗರಕ್ಕೆ ಮರಳಿದ್ದಳು. ಪತಿ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದೆ ಹೋದಾಗ ಅನುಮಾನಗೊಂಡು ರಾಜಗೋಪಾಲ ನಗರ ಠಾಣೆ ಪೊಲೀಸರಿಗೆ ಆಕೆ ದೂರು ಕೊಡಲು ತೆರಳಿದ್ದಳು.
ಬ್ರ್ಯಾಂಡ್ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ
ಆ ವೇಳೆ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಸುಟ್ಟು ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ ವಿಚಾರ ತಿಳಿದ ಪೊಲೀಸರು, ಆ ಮೃತದೇಹ ನೋಡುವಂತೆ ಆನಂದ್ ಪತ್ನಿಗೆ ತಿಳಿಸಿದ್ದರು. ಕೊನೆಗೆ ಮೃತದೇಹದ ಗುರುತು ಪತ್ತೆಯಾಯಿತು. ಬಳಿಕ ಮೃತನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹತ್ಯೆ ಹಿಂದಿನ ದಿನ ಆತನಿಗೆ ಗೆಳೆಯ ಸತೀಶ್ ಕರೆ ಮಾಡಿದ್ದ ಸಂಗತಿ ಗೊತ್ತಾಯಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟರು ಎಂದು ಅಧಿಕಾರಿಗಳು ಹೇಳಿದ್ದಾರೆ.