ಆಟೋದಲ್ಲಿ ಕರೆದೊಯ್ದು ಯುವತಿ ಮೇಲೆ ರೇಪ್ ಮಾಡಿದ್ದ ಕಾಮುಕನ ಬಂಧನ
ಮನೆಗೆ ಹೊರಟ್ಟಿದ್ದವಳ ಮೇಲೆ ಆಟೋ ಚಾಲಕನ ದೌರ್ಜನ್ಯ| ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ| ಈ ಸಂಬಂಧ ದೂರು ನೀಡಿದ್ದ ಸಂತ್ರಸ್ತೆ|
ಬೆಂಗಳೂರು(ಡಿ.19): ಹದಿನೆಂಟು ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ನಿವಾಸಿಯಾದ ಮುಬಾರಕ್ (28) ಬಂಧಿತ ಆಟೋ ಚಾಲಕ. ಡಿ.11ರಂದು ಬೆಳಗ್ಗೆ ಕೃತ್ಯ ನಡೆಸಿದ್ದು, ಈ ಸಂಬಂಧ 18 ವರ್ಷದ ಯುವತಿ ದೂರು ನೀಡಿದ್ದರು. ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿರುವ ಯುವತಿ, ಬಿಡುವಿನ ವೇಳೆಯಲ್ಲಿ ಮದುವೆ ಸಮಾರಂಭಗಳಲ್ಲಿ ಸ್ವಾಗತಕಾರಿಣಿ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಡಿ.10ರಂದು ಹೆಗಡೆ ನಗರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹೋಗಿ ಕೆಲಸ ಮಾಡಿದ್ದರು. ತಡರಾತ್ರಿಯಾಗಿದ್ದರಿಂದ ಕಲ್ಯಾಣ ಮಂಟಪದಲ್ಲೇ ತಂಗಿದ್ದರು. ಮರುದಿನ ಬೆಳಗ್ಗೆ ಮನೆಗೆ ಹೋಗಲು ಥಣಿಸಂದ್ರ ಮುಖ್ಯರಸ್ತೆಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರು.
ಆಟೋದಲ್ಲಿ ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ
ಆಟೋದಲ್ಲಿ ಸ್ಥಳಕ್ಕೆ ಬಂದಿದ್ದ ಮುಬಾರಕ್ ಎಲ್ಲಿಗೆ ಹೋಗಬೇಕೆಂದು ಕೇಳಿದ್ದ. ನಾಗವಾರ ಕಡೆ ಹೋಗಬೇಕೆಂದು ಯುವತಿ ಹೇಳಿದ್ದರು. ಆ ಕಡೆಯೇ ಹೊರಟಿರುವುದಾಗಿ ಹೇಳಿದ್ದ ಆರೋಪಿ, ಯುವತಿಯನ್ನು ಹತ್ತಿಸಿಕೊಂಡಿದ್ದ. ಯುವತಿ ಹೇಳಿದ್ದ ಸ್ಥಳದಲ್ಲಿ ಆಟೋ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದ ಆರೋಪಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿಯೇ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದರು. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.