ಬೆಂಗಳೂರು, (ಜೂನ್.20): ನಗರದ ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಿಳೆಯರಿಗೆ ಕಾಮುಕನ ಕಾಟದಿಂದ ಆತಂಕಕ್ಕೊಳಗಾಗಿದ್ದಾರೆ.

ಬೆಂಗಳೂರಿನ ಎಚ್​.ಎಸ್.ಆರ್. ಲೇಔಟ್​ನ ಸರ್ಕಾರಿ ಹಾಸ್ಟೆಲ್​ನಲ್ಲಿರುವ ಕ್ವಾರಂಟೈನ್​ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಬಾತ್​ರೂಂಗೆ ಹೋಗಿದ್ದ ಯುವತಿಯೊಬ್ಬಳ ಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಆಕೆಯ ರೂಂಮೇಟ್​ಗೂ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ನಡೆದಿದೆ.

ಮುಂಬೈನಿಂದ ಬಂದಿದ್ದ ಯುವತಿಯೊಬ್ಬಳು 7 ದಿನದ ಕ್ವಾರಂಟೈನ್​ಗೆ ಒಳಪಟ್ಟಿದ್ದಳು. ಶುಕ್ರವಾರ ಮುಂಜಾನೆ ಯುವತಿ ಬಾತ್​ರೂಂಗೆ ಹೋಗಿದ್ದಳು. ಈ ವೇಳೆ ಅಲ್ಲೇ ಕ್ವಾರಂಟೈನ್​ ಆಗಿದ್ದ ಮುಂಬೈನಿಂದ ಬಂದಿದ್ದ ಜಯಶಂಕರ್​ ಏಕಾಏಕಿ ಬಾತ್ ರೂಂಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧಿಸುತ್ತಿದ್ದಂತೆ ಹೊರ ಬಂದಿದ್ದಾನೆ.

ಬಳಿಕ ಆಕೆಯ ರೂಂಮೇಟ್ಸ್ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ದೂರು ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.