ಬೆಂಗಳೂರು(ಜು.29): ಜೈಲಿನಲ್ಲೇ ಕುಳಿತು ಕೊಲೆ ಮಾಡಲು ಸುಪಾರಿ ಪಡೆದ ಆರೋಪದ ಮೇಲೆ ರೌಡಿಶೀಟರ್‌ ಕ್ಯಾಟ್‌ರಾಜನ 9 ಸಹಚರರನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯದ ನಿವಾಸಿ, ಪಾಲಿಕೆ ಮಾಜಿ ಸದಸ್ಯೆ ವರಲಕ್ಷ್ಮೀ ಎಂಬುವರು ತಮ್ಮ ಪತಿ ಗೋವಿಂದೇಗೌಡನ ಕೊಲೆ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು 70 ಲಕ್ಷಕ್ಕೆ ಈ ಸುಪಾರಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರದ ಐಜೂರು ನಿವಾಸಿ ಚೇತನ್‌ ಕುಮಾರ್‌ ಅಲಿಯಾಸ್‌ ಚೇತು, ಹೆಗ್ಗನಹಳ್ಳಿ ಕ್ರಾಸ್‌ನ ರಾಜು, ಲಕ್ಕಸಂದ್ರದ ಅರ್ಜುನ್‌, ಅಂದ್ರಹಳ್ಳಿಯ ಓಬಳಯ್ಯ, ಸತೀಶ್‌ ಕುಮಾರ್‌ ಅಲಿಯಾಸ್‌ ಮಂಡೆಲಾ, ಶಿವಕುಮಾರ್‌, ಅಮಿತ್‌ ಅಲಿಯಾಸ್‌ ಬೂ ಕುಟ್ಟಿ, ನಾಗೇಶ್‌ ಹಾಗೂ ದೇವರಾಜ್‌ ಅಲಿಯಾಸ್‌ ದೇವ ಬಂಧಿತರು. ಆರೋಪಿಗಳಿಂದ ಬೈಕ್‌ಗಳು ಸೇರಿದಂತೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ವರಲಕ್ಷ್ಮೀ ನಾಪತ್ತೆಯಾಗಿದ್ದಾಳೆ ಎಂದಿದ್ದಾರೆ.

ಗಂಡನನ್ನು ಕೊಂದು ದೂರು ಕೊಟ್ಟ ಪತ್ನಿ ಸೇರಿ ನಾಲ್ವರು ಆರೆಸ್ಟ್..!

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ 2018ರಲ್ಲಿ ವರಲಕ್ಷ್ಮೀ ಪತಿ ಗೋವಿಂದೇಗೌಡರ ಕೊಲೆಯಾಗಿತ್ತು. ಈ ಹತ್ಯೆಯಲ್ಲಿ ತಮ್ಮ ಕಡುವಿರೋಧಿಗಳಾದ ಚಿಕ್ಕತಿಮ್ಮೇಗೌಡನ ಸೋದರರೇ ಕಾರಣವೆಂದು ಅವರ ಹತ್ಯೆಗೆ ಆಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಳಿವು ಕೊಟ್ಟ ಮೊಬೈಲ್‌:

ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕ್ಯಾಟರಾಜ ಹಾಗೂ ಹೇಮಂತ್‌ ಕುಮಾರ್‌, ಪರಪ್ಪನ ಅಗ್ರಹಾರ ಜೈಲಲ್ಲೇ ಕುಳಿತು ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ಪ್ರಶಾಂತ್‌, ಕ್ಯಾಟರಾಜನ ಗ್ಯಾಂಗ್‌ ಬೆನ್ನಹತ್ತಿದ್ದಾಗ ಸುಪಾರಿ ಕೊಲೆ ತಯಾರಿ ಕುರಿತ ಮೊಬೈಲ್‌ ಸಂಭಾಷಣೆ ಸಿಕ್ಕಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಹೇಮಂತ್‌ನ ಸೋದರ ಚೇತನ್‌ನನ್ನು ಸೆರೆ ಹಿಡಿದಾಗ ಸಂಚಿನ ಕುರಿತು ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

4 ಲಕ್ಷ ಕೊಟ್ಟಿದ್ದ ವರಲಕ್ಷ್ಮೀ 

ಈ ಸುಪಾರಿ ಕೊಲೆಗೆ 70 ಲಕ್ಷದ ಪೈಕಿ 4 ಲಕ್ಷವನ್ನು ಮುಂಗಡವಾಗಿ ನೀಡಿದ್ದ ವರಲಕ್ಷ್ಮೀ ಕೃತ್ಯ ಎಸಗಿದ ಬಳಿಕ ಉಳಿದ ಹಣವನ್ನು ಕೊಡವುದಾಗಿ ಹೇಳಿದ್ದಳು ಎಂದು ಪೊಲೀಸರು ಹೇಳಿದ್ದಾರೆ.