ಬೆಂಗಳೂರು [ಡಿ.01]:  ರಸ್ತೆಯಲ್ಲಿ ಯುವತಿಯರನ್ನು ಚುಡಾಯಿಸಿ ಪುಂಡಾಟಿಕೆ ಮಾಡುತ್ತಿದ್ದಾಗ ಬಂಧಿಸಿ ಠಾಣೆಗೆ ಕರೆತರುವ ವೇಳೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರಿಗೆ ಚಾಕುವಿನಿಂದ ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಆರ್‌.ಟಿ.ನಗರ ಸಮೀಪ ಚಾಮುಂಡಿ ನಗರದಲ್ಲಿ ಶನಿವಾರ ನಡೆದಿದೆ.

ಆರ್‌.ಟಿ.ನಗರ ಪೊಲೀಸ್‌ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ನಾಗರಾಜ್‌ ಹಲ್ಲೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಚಾಮುಂಡಿ ನಗರದ ಕಂಡಾಳ ಹಾಗೂ ಮರ್ದನ್‌ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಾಮುಂಡಿ ನಗರ ಸಮೀಪ ಮಧ್ಯಾಹ್ನ 12ರಲ್ಲಿ ಆರೋಪಿಗಳನ್ನು ನಾಗರಾಜ್‌ ವಶಕ್ಕೆ ಪಡೆದು ಆಟೋದಲ್ಲಿ ಠಾಣೆಗೆ ಕರೆ ತರುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಂಡರ ಹಾವಳಿ: ಆರ್‌.ಟಿ.ನಗರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ಗಳಾದ ನಾಗರಾಜ್‌ ಹಾಗೂ ಚಂದ್ರಶೇಖರ್‌ ಅವರು, ಪಾಸ್‌ಪೋರ್ಟ್‌ ಪರಿಶೀಲನೆ ಸಲುವಾಗಿ ಚಾಮುಂಡಿ ನಗರಕ್ಕೆ ಬೆಳಗ್ಗೆ ತೆರಳಿದ್ದರು. ಆ ವೇಳೆ ಸ್ಥಳೀಯ ನಾಗರಿಕರು, ‘ಇಲ್ಲಿ ಪುಂಡರ ಹಾವಳಿ ವಿಪರೀತವಾಗಿದ್ದು, ರಸ್ತೆಯಲ್ಲಿ ಹೆಣ್ಣು ಮಕ್ಕಳು ಓಡಾಡಲು ಭಯಬೀಳುತ್ತಾರೆ. ನೀವು ಸ್ಪಲ್ಪ ಗಸ್ತು ಮಾಡಿ’ ಎಂದು ಕೋರಿದ್ದರು. ಈ ಮನವಿಗೆ ಸ್ಪಂದಿಸಿದ ಆ ಇಬ್ಬರು ಹೆಡ್‌ ಕಾನ್‌ಸ್ಟೇಬಲ್‌ಗಳು, ಕೂಡಲೇ ಪುಂಡಾಟಿಕೆ ನಡೆಸುತ್ತಿದ್ದ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗ ಪೊಲೀಸರನ್ನು ಕಂಡು ತಕ್ಷಣವೇ ನಾಲ್ವರ ಪೈಕಿ ಇಬ್ಬರು ಓಡಿ ಹೋಗಿದ್ದಾರೆ. ಕೊನೆಗೆ ಪರಾರಿಯಾಗುತ್ತಿದ್ದ ಕಂಡಾಳ ಹಾಗೂ ಮರ್ದನ್‌ನನ್ನು ಹಿಡಿದ ಪೊಲೀಸರು, ಬಳಿಕ ಅವರನ್ನು ಆಟೋದಲ್ಲಿ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ನಾಗರಾಜ್‌ ಅವರಿಗೆ ಚಾಕುವಿನಿಂದ ಇರಿದ ಕಂಡಾಳ, ತನ್ನ ಗೆಳೆಯನ ಜತೆ ಕಾಲ್ಕಿತ್ತಿದ್ದಾನೆ. ಗಾಯಾಳು ಹೆಡ್‌ ಕಾನ್‌ಸ್ಟೇಬಲ್‌ನನ್ನು ಅದೇ ಆಟೋದಲ್ಲಿ ಸಮೀಪದ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.