Asianet Suvarna News Asianet Suvarna News

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ ಪ್ರಿಯಕರನಿಂದ ಮಗನ ಬರ್ಬರ ಹತ್ಯೆ

*  ತಾಯಿಯ ಅಕ್ರಮ ಸಂಬಂಧಕ್ಕೆ ಮಗ ಬಲಿ
*  ಹಲಸೂರು ಠಾಣಾ ವ್ಯಾಪ್ತಿ ಘಟನೆ
*  ಹತ್ಯೆಯಲ್ಲಿ ಗೀತಾಳ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ

17 Year Old Boy Killed in Bengaluru for Mother Immoral Relationship grg
Author
Bengaluru, First Published Oct 6, 2021, 7:58 AM IST
  • Facebook
  • Twitter
  • Whatsapp

ಬೆಂಗಳೂರು(ಅ.06): ತನ್ನ ತಾಯಿ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಮಗನನ್ನು ತಾಯಿಯ ಪ್ರಿಯಕರ ಚಾಕುವಿನಿಂದ ಕೊಂದಿರುವ(Murder) ಘಟನೆ ಹಲಸೂರು ಸಮೀಪ ನಡೆದಿದೆ. 

ಮರ್ಫಿ ಟೌನ್‌ ನಿವಾಸಿ ನಂದು(17) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಆರೋಪಿ ಬಾಗಲೂರು ಸಮೀಪದ ನಿವಾಸಿ ಶಕ್ತಿವೇಲುನನ್ನು ಬಂಧಿಸಿದ ಪೊಲೀಸರು,(Police) ಮೃತನ ತಾಯಿ ಗೀತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮರ್ಫಿ ಟೌನ್‌ನಲ್ಲಿರುವ ಗೀತಾ ಮನೆಗೆ ಶಕ್ತಿವೇಲು ಸೋಮವಾರ ರಾತ್ರಿ ಬಂದಾಗ ಈ ಕೊಲೆ ನಡೆದಿದೆ.

ತಾಯಿಯ ಅನೈತಿಕ ಸಂಬಂಧ ಅರಿತಿದ್ದ ಹೆತ್ತ ಮಗಳನ್ನೇ ಕೊಲೆ ಮಾಡಿದ ಪೋಷಕರ

ತಾಯಿ ಪ್ರೇಮಕ್ಕೆ ಮಗನ ವಿರೋಧ:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆರು ವರ್ಷಗಳ ಹಿಂದೆ ಪತಿಯಿಂದ ಪ್ರತ್ಯೇಕವಾಗಿ ತನ್ನ ಇಬ್ಬರು ಮಕ್ಕಳ ಜತೆ ಮರ್ಫಿಟೌನ್‌ನಲ್ಲಿ ಗೀತಾ ನೆಲೆಸಿದ್ದಾಳೆ. ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆಕೆಗೆ ಫೇಸ್‌ಬುಕ್‌ ಮೂಲಕ ಆಟೋ ಚಾಲಕ ಅವಿವಾಹಿತ ಶಕ್ತಿವೇಲು ಪರಿಚಯವಾಗಿತ್ತು. ಈ ಸ್ನೇಹವು ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿದೆ. ತನ್ನ ತಾಯಿ ಹಾದಿ ತಪ್ಪಿರುವ ವಿಷಯ ತಿಳಿದು ಕೆರಳಿದ ನಂದು, ಆಕೆಯ ಗೆಳೆಯ ಶಕ್ತಿವೇಲು ಮನೆಗೆ ಬಂದಾಗ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಪ್ರಿಯತಮೆ ಮನೆಗೆ ಸೋಮವಾರ ರಾತ್ರಿ ಶಕ್ತಿವೇಲು ಬಂದಿದ್ದಾನೆ. ಆ ವೇಳೆ ಮನೆಯಲ್ಲಿದ್ದ ನಂದು, ನೀನು ಯಾಕೆ ಮನೆಗೆ ಬರುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಈ ಹಂತದಲ್ಲಿ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಬ್ಬರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ನಂದುಗೆ ಶಕ್ತಿವೇಲು ಇರಿದಿದ್ದಾನೆ. ಕೂಡಲೇ ಪುತ್ರನ ರಕ್ಷಣೆಗೆ ಧಾವಿಸಿದ ಗೀತಾ, ಸ್ಥಳೀಯರ ಸಹಕಾರದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಯಿ ವಿಚಾರಣೆ:

ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಹತ್ಯೆಯಲ್ಲಿ ಗೀತಾಳ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಹೀಗಾಗಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios