ಬೆಳಗಾವಿ[ಡಿ.07]: ಹೈದರಬಾದ್‌ನ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಜೀವ ದಹನಮಾಡಿದ್ದ ನಾಲ್ವರು ಆರೋಪಿಗಳನ್ನು ತೆಲಂಗಾಣದ ಸೈಬರಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ ನೇತೃತ್ವದ ತಂಡ ಎನ್‌ಕೌಂಟರ್‌ ಮಾಡಿದೆ. ಆದರೆ, ಇದಕ್ಕೂ ಮೊದಲು 12 ವರ್ಷಗಳ ಹಿಂದೆಯೇ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಭೂಗತ ಪಾತಕಿಯನ್ನು ಬೆಳಗಾವಿಯಲ್ಲಿ ಅಂದಿನ ಎಸ್ಪಿಯಾಗಿದ್ದ ಹೇಮಂತ್‌ ನಿಂಬಾಳ್ಕರ್‌ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಇದು ಅತ್ಯಾಚಾರ ನಡೆಸಿದ ಆರೋಪಿಯೊಬ್ಬನನ್ನು ಎನ್‌ಕೌಂಟರ್‌ ಮಾಡಿದ ರಾಜ್ಯದಲ್ಲೇ ಮೊದಲ ಪ್ರಕರಣ ಇದಾಗಿತ್ತು.

'ಅದೇ ಸ್ಥಳ, ಅದೇ ಸಮಯ, ಬೇಟೆಗಾರರೇ ಬೇಟೆಯಾದ್ರು'

ಅತ್ಯಾಚಾರ ಆರೋಪಿ, ಭೂಗತ ಪಾತಕಿ ಪ್ರವೀಣ ಶಿಂತ್ರೆಯನ್ನು ಸೆ.6, 2007ರಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವ ಮೂಲಕ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳಲ್ಲಿಯ ಪಾತಕಿಗಳ ಸದ್ದಡಗಿಸಿ, ಭೂಗತ ಲೋಕದ ನೆಲೆಯನ್ನೇ ಧ್ವಂಸಗೊಳಿಸಲಾಗಿತ್ತು. ಮಾತ್ರವಲ್ಲ, ಕಾಮುಕರಿಗೆ ಎಂತಹ ಪರಿಸ್ಥಿತಿ ಬರಬಹುದು ಎಂಬುವುದನ್ನು ಈ ಪ್ರಕರಣ ಒತ್ತಿ ಹೇಳಿತ್ತು. ಈ ಘಟನೆಯಿಂದ ಬೆಳಗಾವಿ ಸೇರಿದಂತೆ ನಾನಾ ಭಾಗಗಳಲ್ಲಿನ ಮಹಿಳೆಯರು ಕೂಡ ಸಂಭ್ರಮಾಚರಣೆ ಮಾಡಿದ್ದು ಮಾತ್ರ ಸುಳ್ಳಲ್ಲ. ಬೆಳಗಾವಿಯ ಗಣೇಶಪುರದ ಲಕ್ಷ್ಮಿ ನಗರದ ರಾಜದೀಪ ಬಂಗ್ಲೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಖಾನಾಪುರದ ಅರಣ್ಯ ಪ್ರದೇಶದಲ್ಲಿ ಎಸೆಯಲಾಗಿತ್ತು.

2007, ಸೆ.5ರಂದು ರಾತ್ರಿ ಪ್ರವೀಣ ಶಿಂತ್ರೆಯನ್ನು ಬಂಧಿಸಿ, ಬೆಳಗಾವಿಗೆ ಕರೆತರುತ್ತಾರೆ. ಸೆಪ್ಟೆಂಬರ್‌ 6 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಳಗಾವಿಯ ರಾಜದೀಪ ಬಂಗ್ಲೆಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ ಪ್ರವೀಣ ಶಿಂತ್ರೆಯನ್ನು ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲಾಯಿತು. ಅಂದಿನ ಬೆಳಗಾವಿ ಎಸ್ಪಿ ಹೇಮಂತ ನಿಂಬಾಳಕರ ನೇತೃತ್ವದಲ್ಲಿ ಅಂದಿನ ಪಿಸ್‌ಐಗಳಾಗಿದ್ದ ನಾರಾಯಣ ಬರಮಣಿ, ಶಂಕರ ಮಾರಿಹಾಳ, ಮಹಾಂತೇಶ್ವರ ಜಿದ್ದಿ ಅವರು ಪ್ರವೀಣ ಶಿಂತ್ರೆಯನ್ನು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ್ದರು.

'ಎನ್‌ಕೌಂಟರ್‌ನಿಂದ ಅತ್ಯಾಚಾರಿಗಳ ಕನಸಲ್ಲೂ ಹೆದರಿಕೆ ಹುಟ್ಟುತ್ತೆ'