ಟೀಂ ಇಂಡಿಯಾದ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಪಾಕಿಗಳಿಗೆ ಟಾಂಗ್ ನೀಡಿದ್ದಾರೆ.
ನವದೆಹಲಿ: ಭಾರತದ ವಿರುದ್ಧ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತೊಮ್ಮೆ ಸೋಲಿನ ರುಚಿಯನ್ನು ನೋಡಿದೆ. ಭಾನುವಾರ ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್ ಟ್ರೋಫಿಯನ್ನು ಭಾರತ ತಂಡ ತನ್ನದಾಗಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರಾಗಿದ್ದರಿಂದ ಮ್ಯಾಚ್ ತೀವ್ರ ಕುತೂಹಲ ಕೆರಳಿಸಿತ್ತು. ಎಂದಿನಂತೆ ಪಾಕ್ ತಂಡವನ್ನು ಸೋಲಿಸಿದ ಭಾರತ ಪ್ರಶಸ್ತಿಗೆ ಮುತ್ತಿಟ್ಟಿದೆ. ಇದೀಗ ಟೀಂ ಇಂಡಿಯಾದ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಪಾಕಿಗಳಿಗೆ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಸಾಕು ಬಿಡಿ, ಸೋಲಿನಿಂದ ಮೊದಲೇ ಕಂಗೆಟ್ಟು ಕುಳಿತಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಪಂದ್ಯ ಗೆದ್ದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ವಿಡಿಯೋವನ್ನು ಮೂವರು ಆಟಗಾರರು ಮಾಡಿದ್ದಾರೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಕುಂಟುತ್ತಾ ಡ್ರೆಸ್ಸಿಂಗ್ ರೂಮ್ ಒಳಗೆ ಬಂದಿದ್ದಾರೆ. ಈ ವಿಡಿಯೋಗೆ ಟ್ರೆಂಡಿಂಗ್ ತೌಬಾ..ತೌಬಾ ಹಾಡು ಹಾಕಿದ್ದಾರೆ. ಈ ಹಾಡಿನಲ್ಲಿ ನಟ ವಿಕ್ಕಿ ಕೌಶಲ್ ಫುಟ್ ವರ್ಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಈ ಹಾಡಿಗೆ ತದ್ವಿರುದ್ದವಾಗಿ ಕುಂಟುತ್ತಾ ಮೂವರು ಆಟಗಾರರು ಬಂದಿದ್ದಾರೆ.
ಪಾಕ್ ತಂಡಕ್ಕೆ ಟಾಂಗ್ ಎಂದ ಫ್ಯಾನ್ಸ್
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಪದೇ ಪದೇಗ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರಗುಳಿಯುತ್ತಿರುತ್ತಾರೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಈ ವಿಡಿಯೋ ಮೂಲಕ ಪಾಕಿಸ್ತಾನ ತಂಡದ ಫಿಟ್ನೆಸ್ ವ್ಯಂಗ್ಯವಾಗಿ ತೋರಿಸಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪಾಕ್ ವೇಗದ ಬೌಲರ್‌ಗಳು ಗಾಯಗೊಂಡಿದ್ದರು. ಇನ್ನು ಫೈನಲ್ ಪಂದ್ಯದಲ್ಲಿಯೂ ಗಾಯಗೊಂಡು ಮಿಸ್ಬಾ ಉಲ್ ಹಕ್ ಪೆವಿಲಿಯನ್ ಸೇರಿದ್ದರು. ಮೈದಾನದಿಂದ ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ಆಟಗಾರರು ಮಿಸ್ಬಾ ಉಲ್ ಹಕ್ ಅವರನ್ನು ಹೊರಗೆ ಕರೆದುಕೊಂಡು ಬಂದಿದ್ದರು.
ಕೆಲ ನೆಟ್ಟಿಗರಿಂದ ತೀವ್ರ ಖಂಡನೆ
ಇನ್ನು ಈ ವಿಡಿಯೋ ನೋಡಿದ ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರು ಆಟಗಾರರ ನಡೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ಮೂಲಕ ದಿವ್ಯಾಂಗರನ್ನು ಮೂವರು ಅವಮಾನಿಸಿದ್ದಾರೆ. ಇದೊಂದು ಸಂಪೂರ್ಣ ಅಸಹ್ಯಕರವಾದ ವಿಡಿಯೋ. ಈ ರೀತಿಯ ಸಂಭ್ರಮಾಚರಣೆಯ ಅವಶ್ಯಕತೆ ಇರಲಿಲ್ಲ. ಜೀವನದಲ್ಲಿ ಯಾರೂ ಸಹ ಅಂಗವೈಕಲ್ಯದಿಂದ ಹಟ್ಟಲು ಬಯಸಲ್ಲ. ಅದು ದೇವರು ಸೃಷ್ಟಿ, ಇದೀಗ ಅದನ್ನು ಅವಮಾನಿಸುವ ಕೆಲಸ ನಡೆದಿದೆ. ದಿವ್ಯಾಂಗ ಮಕ್ಕಳ ಪೋಷಕರಿಗೆ ಕೇಳಿ ಕಷ್ಟ ಗೊತ್ತಾಗುತ್ತದೆ. ನಮ್ಮ ಖುಷಿ ಬೇರೆಯವರಿಗೆ ನೋವುಂಟು ಮಾಡಬಾರದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಾಕ್ ವಿರುದ್ಧ ಭಾರತಕ್ಕೆ ಗೆಲುವು
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಪಾಕ್ ತಂಡ 6 ವಿಕೆಟ್ ನಷ್ಟಕ್ಕೆ 156 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.1 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಪಂದ್ಯದ ಜೊತೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
