ಬರೋಡ(ಏ.06): ಒಂದೆಡೆ ಸರ್ಕಾರ ಕೊರೋನಾ ವೈರಸ್‌ನಿಂದ ಭಾರತವನ್ನು ಮುಕ್ತವಾಗಿಸಲು ಶ್ರಮಿಸುತ್ತಿದೆ. ಇತ್ತ ಕ್ರಿಕೆಟಿಗರು, ಸೆಲೆಬ್ರೆಟಿಗಳು, ಉದ್ಯಮಿಗಳು ತಮ್ಮದೇ ಆದ ಕೂಡುಗೆ ನೀಡುತ್ತಿದ್ದಾರೆ. ಟೀಂ ಇಂಡಿಯಾದ ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಸಹೋದರರು ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಲಾಕ್‌ಡೌನ್‌ನಿಂದ ಹಲವರು ಆಹಾರಕ್ಕೆ ಪರದಾಡುತ್ತಿದ್ದಾರೆ. ಇದೀಗ ಪಠಾಣ್ ಸಹೋದರರು ನಿರ್ಗತಿಕರು, ಬಡವರ ಹಸಿವು ನೀಗಿಸುತ್ತಿದ್ದಾರೆ.

ಕೊರೋನಾ ಸಂಕಷ್ಟ: PM CARES Fund ಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಯುವರಾಜ್ ಸಿಂಗ್

ಕೊರೋನಾ ವೈರಸ್ ಹರಡುತ್ತಿರುವ ಬೆನ್ನಲ್ಲೇ ಪಠಾಣ್ ಸಹೋದರರು, ಉತಿಕ ಮಾಸ್ಕ್ ವಿತರಿಸಿದ್ದರು. ಇದೀಗ ಬಡವರಿಗೆ ಹಾಗೂ ನಿರ್ಗತಿಕರಿಗೆ ಒಟ್ಟು 10,000 ಕೆಜಿ ಅಕ್ಕಿ ಹಾಗೂ 700 ಕೆ.ಜಿ ಆಲೂಗೆಡ್ಡಿ ವಿತರಿಸಿದ್ದಾರೆ. ಯಾರೂ ಕೂಡ ಹಸಿವಿನಿಂದ ಇರಬಾರದು ಎಂದು ಪಠಾಣ ಬ್ರದರ್ಸ್ ಅಗತ್ಯವಿರುವ ಮಂದಿಗೆ ನೆರವಿನ ಹಸ್ತ ಚಾಚಿದ್ದಾರೆ. ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಕೈಲಾದ ಸಹಾಯ ಮಾಡುತ್ತೇವೆ, ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದ್ದೇವೆ. ಮುಂದಿನ ಕೆಲ ದಿನಗಳು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಇದ್ದೂ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.

ಬಿಸಿಸಿಐ, ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಪಿವಿ ಸಿಂಧು, ಮೇರಿ ಕೋಮ್ ಹಿಮಾದಾಸ್ ಸೇರಿದಂತೆ ಹಲವು ಕ್ರೀಡಾಪಟುಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡಿದ್ದಾರೆ.