ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎಲಿಮಿನೇಟರ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಇನ್ನು ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿನೂತನವಾಗಿ ಶುಭ ಕೋರಿದ್ದಾರೆ.
ಬೆಂಗಳೂರು(ಮೇ.22): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿನೂತನವಾಗಿ ವಿಶ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲೇ ಮದ್ಯದ ದೊರೆಯ ಕಾಲೆಳೆದಿದ್ದಾರೆ
ಹೌದು, 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಸೋಲು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಇನ್ನೇನು ಒಂದು ಪಂದ್ಯ ಸೋತರೂ ನಾಕೌಟ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದು ಸತತ 6 ಪಂದ್ಯಗಳನ್ನು ಜಯಿಸಿ ಪವಾಡ ಸದೃಶ ರೀತಿಯಲ್ಲಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎಲಿಮಿನೇಟರ್ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದೆ. ಇನ್ನು ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿನೂತನವಾಗಿ ಶುಭ ಕೋರಿದ್ದಾರೆ.
ಇಂದು ಆರ್‌ಸಿಬಿ vs ರಾಯಲ್ಸ್ ಐಪಿಎಲ್ ಎಲಿಮಿನೇಟರ್ ಕದನ
"ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಾಗಿ ಹಾಗೂ ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದಾಗಲೇ ನನಗನಿಸಿತ್ತು, ಇದಕ್ಕಿಂತ ಒಳ್ಳೆಯ ಆಯ್ಕೆ ಸಾಧ್ಯವೇ ಇಲ್ಲವೆಂದು. ಆಗಲೇ ಆರ್‌ಸಿಬಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ನನಗನಿಸಿತ್ತು. ಒಳ್ಳೆಯದಾಗಲಿ ಆರ್‌ಸಿಬಿಗೆ" ಎಂದು ವಿಜಯ್ ಮಲ್ಯ ತಮ್ಮ ಅಧಿಕೃತ ಜಾಲತಾಣವಾದ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ
ಮಲ್ಯ ಕಾಲೆಳೆದ ನೆಟ್ಟಿಗರು:
ಇನ್ನು ಎಸ್‌ಬಿಐಗೆ ಸಾಲ ಮರು ಪಾವತಿ ಮಾಡದೇ ದೇಶ ತೊರೆದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಆರ್‌ಸಿಬಿ ಮಾಜಿ ಮಾಲೀಕನನ್ನು ನೆಟ್ಟಿಗರು ಕಾಲೆಳೆದಿದ್ದಾರೆ. ಸಮೀರ್ ಅಲ್ಲನ್ ಎನ್ನುವ ನೆಟ್ಟಿಗ, ಎಸ್‌ಬಿಐ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನೆನಿಸುತ್ತಿದೆ ಎಂದು ಕೇಳಿದ್ದಾರೆ.
ಇನ್ನೋರ್ವ ನೆಟ್ಟಿಗ ಈ ಸಂದರ್ಭದಲ್ಲಿ ನೀವು ಸ್ಟೇಡಿಯಂಗೆ ಬಂದು ಆರ್‌ಸಿಬಿ ಮ್ಯಾಚ್ ನೋಡಬೇಕು ಎಂದೆನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ನೆಟ್ಟಿಗ, 4 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಜೆಯೇತರ ದಿನದಲ್ಲಿ ಟ್ವೀಟ್ ಮಾಡಿದ್ದೀರ ಎಂದರೆ ಖಂಡಿತ ಈ ಸಲ ಆರ್‌ಸಿಬಿ ಕಪ್ ಗೆಲ್ಲಲಿದೆ ಎಂದು ಮಲ್ಯ ಕಾಲೆಳೆದಿದ್ದಾರೆ.
