Asianet Suvarna News Asianet Suvarna News

ಗುಡುಗಿದ ಶೆಫರ್ಡ್, ಡೇವಿಡ್ ; ಡೆಲ್ಲಿಗೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್‌

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು

Tim David Romario Shepherd Late Show Propels Mumbai Indians post 234 for 5 Against Delhi Capitals kvn
Author
First Published Apr 7, 2024, 5:24 PM IST

ಮುಂಬೈ(ಏ.07): ರೋಹಿತ್ ಶರ್ಮಾ, ಇಶಾನ್ ಕಿಶನ್, ಟಿಮ್ ಡೇವಿಡ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲೇ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ 7 ಓವರ್‌ಗೆ 80 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು.

ಮುಂಬೈ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ..! ಮುಂಬೈ ಕೂಡಿಕೊಂಡ ಸೂರ್ಯಕುಮಾರ್ ಯಾದವ್

ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ ಶರ್ಮಾ ಕೇವಲ 27 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 49 ರನ್ ಬಾರಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ಸೂರ್ಯಕುಮಾರ್ ಯಾದವ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಏನ್ರಿಚ್ ನೋಕಿಯಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ ಕೇವಲ 23 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 42 ರನ್ ಗಳಿಸಿ ಅಕ್ಷರ್‌ ಪಟೇಲ್‌ಗೆ ಎರಡನೇ ಬಲಿಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಎಡಗೈ ಬ್ಯಾಟರ್ ತಿಲಕ್ ವರ್ಮಾ ಕೇವಲ 6 ರನ್ ಗಳಿಸಿ ಎಡಗೈ ವೇಗಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು.

ಪಾಂಡ್ಯ-ಡೇವಿಡ್ ಆಸರೆ: ಕೇವಲ 121 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ 5ನೇ ವಿಕೆಟ್‌ಗೆ ಜತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಟಿಮ್ ಡೇವಿಡ್ ಸಮಯೋಚಿತ 60 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 39 ರನ್ ಬಾರಿಸಿ ನೋಕಿಯಾಗೆ ಎರಡನೇ ಬಲಿಯಾದರು.

ಅಬ್ಬರಿಸಿದ ಡೇವಿಡ್-ಶೆಫರ್ಡ್‌: ಇನ್ನು ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ ಹಾಗೂ ಏನ್ರಿಚ್ ನೋಕಿಯಾ 6ನೇ ವಿಕೆಟ್‌ಗೆ ಕೇವಲ 13 ಎಸೆತಗಳಲ್ಲಿ 53 ರನ್‌ಗಳ ಜತೆಯಾಟವಾಡಿದರು. ಟಿಮ್ ಡೇವಿಡ್ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 45 ರನ್ ಬಾರಿಸಿದರೆ, ರೊಮ್ಯಾರಿಯೋ ಶೆಫರ್ಡ್ ಕೇವಲ 10 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 39 ರನ್ ಚಚ್ಚಿದರು. 20ನೇ ಓವರ್‌ ಎಸೆದ ಏನ್ರಿಚ್ ನೋಕಿಯಗೆ ಶೆಫರ್ಡ್ 4 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 32 ರನ್ ಚಚ್ಚಿದರು.

 

 

Follow Us:
Download App:
  • android
  • ios