"

ಮುಂಬೈ(ಫೆ.17): ಬಹುನಿರೀಕ್ಷಿತ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಭಾನುವಾರ ಘೋಷಿಸಿದರು. ಭಾನುವಾರ ಇಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಇನ್ನಿತರ ಅಗ್ರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಯಾವ ಪಿಚ್‌ನಲ್ಲಾದರೂ ಪಿಂಕ್ ಬಾಲ್ ಟೆಸ್ಟ್ ಆಡಲು ರೆಡಿ: ಕೊಹ್ಲಿ

ಕಳೆದ ತಿಂಗಳು, ‘ಆಸ್ಪ್ರೇಲಿಯಾದಲ್ಲಿ ಹಗಲು-ರಾತ್ರಿ ಪಂದ್ಯವಾಡಲು ನಾವು ಸಿದ್ಧರಿದ್ದೇವೆ. ಪಂದ್ಯವನ್ನು ಯಾವ ಕ್ರೀಡಾಂಗಣದಲ್ಲಿ ಬೇಕಿದ್ದರೂ ಆಯೋಜಿಸಲಿ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದರು. ಕೊಹ್ಲಿಯ ಹೇಳಿಕೆಯನ್ನು ಪರಿಗಣಿಸಿ, ಕ್ರಿಕೆಟ್‌ ಆಸ್ಪ್ರೇಲಿಯಾದ ಪ್ರಸ್ತಾಪಕ್ಕೆ ಬಿಸಿಸಿಐ ಸಮ್ಮತಿ ಸೂಚಿಸಿದೆ.

ಪಂದ್ಯವನ್ನು ಎಲ್ಲಿ ಆಯೋಜಿಸಲಾಗುತ್ತದೆ ಎನ್ನುವುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕ್ರಿಕೆಟ್‌ ಆಸ್ಪ್ರೇಲಿಯಾ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಭಾರತೀಯ ಪ್ರೇಕ್ಷಕರಿಗೆ ಅನುಕೂಲವಾಗಲಿದೆ ಎನ್ನುವ ಕಾರಣದಿಂದಾಗಿ ಪಂದ್ಯವನ್ನು ಪರ್ತ್ ಇಲ್ಲವೇ ಅಡಿಲೇಡ್‌ನಲ್ಲಿ ನಡೆಸಬಹುದು ಎನ್ನಲಾಗಿದೆ.

ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

2018-19ರ ಪ್ರವಾಸದ ವೇಳೆಯೇ ಭಾರತವನ್ನು ಹಗಲು-ರಾತ್ರಿ ಪಂದ್ಯ ಆಡುವಂತೆ ಕ್ರಿಕೆಟ್‌ ಆಸ್ಪ್ರೇಲಿಯಾ ಕೇಳಿಕೊಂಡಿತ್ತು. ಆದರೆ ಅನುಭವದ ಕೊರತೆಯ ನೆಪ ಹೇಳಿ ಭಾರತ ಒಪ್ಪಿರಲಿಲ್ಲ. ಆಸ್ಪ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್‌ ಪೈನ್‌, ಭಾರತ ತಂಡ ಹಗಲು-ರಾತ್ರಿ ಟೆಸ್ಟ್‌ ಆಡಬೇಕಿದ್ದರೆ ಕೊಹ್ಲಿಯ ಒಪ್ಪಿಗೆ ಬೇಕು ಎಂದು ಕಾಲೆಳೆದಿದ್ದರು.

ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮನವೊಲಿಸಿ, ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನು ಆಯೋಜಿಸಿದರು. ಆ ಪಂದ್ಯವನ್ನು ಭಾರತ ದೊಡ್ಡ ಅಂತರದಲ್ಲಿ ಗೆದ್ದುಕೊಂಡಿತ್ತು. ಕಳೆದ ತಿಂಗಳು ಭಾರತ-ಆಸ್ಪ್ರೇಲಿಯಾ ನಡುವಿನ ದ್ವಿಪಕ್ಷೀಯ ಏಕದಿನ ಸರಣಿ ವೇಳೆ ಗಂಗೂಲಿ, ಶಾ ಹಾಗೂ ಇನ್ನಿತರ ಬಿಸಿಸಿಐ ಅಧಿಕಾರಿಗಳನ್ನು ಕ್ರಿಕೆಟ್‌ ಆಸ್ಪ್ರೇಲಿಯಾದ ಮುಖ್ಯಸ್ಥ ಎಲ್‌ರ್‍ ಎಡ್ಡಿಂಗ್ಸ್‌ ಭೇಟಿ ಮಾಡಿ, 4 ಪಂದ್ಯಗಳ ಸರಣಿ ವೇಳೆ 2 ಪಂದ್ಯಗಳನ್ನು ಹಗಲು-ರಾತ್ರಿ ಮಾದರಿಯಲ್ಲಿ ಆಡುವಂತೆ ಕೇಳಿಕೊಂಡಿದ್ದರು. ಆದರೆ ಬಿಸಿಸಿಐ ಒಂದು ಪಂದ್ಯವನ್ನಷ್ಟೇ ಆಡುವುದಾಗಿ ಪ್ರತಿಕ್ರಿಯಿಸಿತ್ತು. ಆ ನಂತರ ಪತ್ರಿಕಾಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ, ‘ಆಸ್ಪ್ರೇಲಿಯಾದ ಸವಾಲಿಗೆ ನಾವು ಸಿದ್ಧರಿದ್ದೇವೆ. ಪರ್ತ್, ಬ್ರಿಸ್ಬೇನ್‌ ಎಲ್ಲಿ ಬೇಕಿದ್ದರೂ ಆಯೋಜಿಸಲಿ. ಟೆಸ್ಟ್‌ ಸರಣಿಯಲ್ಲಿ ಒಂದು ಪಂದ್ಯವನ್ನು ಹಗಲು-ರಾತ್ರಿ ಮಾದರಿಯಲ್ಲಿ ಆಡುವುದರಿಂದ ರೋಚಕತೆ ಹೆಚ್ಚಲಿದೆ’ ಎಂದು ತಂಡದ ಪರವಾಗಿ ಒಪ್ಪಿಗೆ ಸೂಚಿಸಿದ್ದರು.

ಅಹಮದಾಬಾದ್‌ನಲ್ಲಿ ಪಿಂಕ್‌ ಬಾಲ್‌ ಪಂದ್ಯ?

2021ರಲ್ಲಿ ಇಂಗ್ಲೆಂಡ್‌ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಲಿರುವ ಕೊನೆ ಸರಣಿ ಅದು. ಆ ಸರಣಿಯಲ್ಲಿ ಒಂದು ಪಂದ್ಯವನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸುವುದಾಗಿ ಗಂಗೂಲಿ ತಿಳಿಸಿದರು. ಪಂದ್ಯಕ್ಕೆ ಅಹಮದಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಮೊಟೇರಾ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಕ್ರೀಡಾಂಗಣ 1 ಲಕ್ಷಕ್ಕೂ ಹೆಚ್ಚಿನ ಆಸನ ಸಾಮರ್ಥ್ಯ ಹೊಂದಿದೆ. ಭಾರತ ಆಡುವ ಪ್ರತಿ ಸರಣಿಯಲ್ಲೂ ಒಂದು ಪಂದ್ಯವನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಲು ಪ್ರಯತ್ನಿಸಲಾಗುವುದು ಎಂದು ಗಂಗೂಲಿ ಹೇಳಿದರು.

ಐಪಿಎಲ್‌ ಬಳಿಕ ಲಂಕಾ ಪ್ರವಾಸ?

13ನೇ ಆವೃತ್ತಿಯ ಐಪಿಎಲ್‌ ಮುಕ್ತಾಯಗೊಂಡ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಪ್ರವಾಸದ ವೇಳೆ ಭಾರತ, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರವಾಸದ ವೇಳಾಪಟ್ಟಿ ಮುಂದಿನ ತಿಂಗಳು ಪ್ರಕಟಗೊಳ್ಳಲಿದೆ ಎನ್ನಲಾಗಿದೆ.