ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಟೀಂ ಇಂಡಿಯಾ ವೇಗಿ ತೆರೆ ಎಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಮುಂಬರುವ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಎಲ್ಲಾ ಗಾಳಿ ಸುದ್ದಿಗಳಿಗೆ ಸ್ವತಃ ಶಮಿ ಸಾಮಾಜಿಕ ಜಾಲತಾಣವಾದ ಎಕ್ಸ್(ಟ್ವಿಟರ್) ಮೂಲಕ ತೆರೆ ಎಳೆದಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಮೊಹಮ್ಮದ್ ಶಮಿ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಮಿ ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಶಮಿ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.
ಇಂದಿನಿಂದ ಮಹಿಳಾ ಟಿ20 ವಿಶ್ವಕಪ್ ಹಬ್ಬ; ಅರಬ್ಬರ ನಾಡಿನಲ್ಲಿ ಕ್ರಿಕೆಟ್ ಕಲವರ
ಮೊಹಮ್ಮದ್ ಶಮಿ ಇದೀಗ ತಾನೆ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅವರು ಸದ್ಯದಲ್ಲಿಯೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ರೆಡಿಯಾಗಿದ್ದಾರೆ. ಆದರೆ ಅವರಿಗೆ ಮತ್ತೆ ಪಾದದಲ್ಲಿ ಕೊಂಚ ಸೆಳೆತ ಕಾಣಿಸಿಕೊಂಡಿತ್ತು. ಹೀಗಾಗಿ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಸುಧಾರಿಸಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಆದರೆ ಇದೀಗ ಮೊಹಮ್ಮದ್ ಶಮಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ತಾವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದೇನೆ ಎನ್ನುವುದು ಶುದ್ದ ಸುಳ್ಳು ಎಂದು ಹೇಳಿದ್ದಾರೆ.
ತವರಿನಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ಭಾರತ ಹೊಸ ಇತಿಹಾಸ!
"ಯಾಕೆ ಈ ರೀತಿ ಆಧಾರರಹಿತ ಗಾಳಿಸುದ್ದಿಗಳನ್ನು ಹಬ್ಬಿಸುತ್ತೀರ?. ನಾನು ಆದಷ್ಟು ಬೇಗ ಚೇತರಿಸಿಕೊಳ್ಳಲು ಕಠಿಣ ಪರಿಶ್ರಮ ಹಾಕುತ್ತಿದ್ದು, ಆದಷ್ಟು ಬೇಗ ಮೈದಾನಕ್ಕಿಳಿಯಲು ಹಾತೊರೆಯುತ್ತಿದ್ದೇನೆ. ನಾನಾಗಲೀ ಅಥವಾ ಬಿಸಿಸಿಐ ಆಗಲಿ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ನನ್ನ ಲಭ್ಯತೆ ಬಗ್ಗೆ ಎಲ್ಲೂ ಮಾತಾಡಿಲ್ಲ. ನಾನು ಸಾರ್ವಜನಿಕರಲ್ಲಿ ಒಂದಂತೂ ಮನವಿ ಮಾಡಿಕೊಳ್ಳುತ್ತೇನೆ, ಅದೇನೆಂದರೆ, ದಯವಿಟ್ಟು ಅನಧಿಕೃತ ಮೂಲಗಳಿಂದ ಬಂದ ಸುದ್ದಿಯನ್ನು ಯಾರೂ ಗಮನಕೊಡಬೇಡಿ. ದಯವಿಟ್ಟು ನನ್ನ ಹೇಳಿಕೆಗಳಿಲ್ಲದ ಸುಳ್ಳು ಸುದ್ದಿ ಹರಡುವುದನ್ನು ಇಲ್ಲಿಗೇ ನಿಲ್ಲಿಸಿ" ಎಂದು ಶಮಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
