ಇವರೇ ನೋಡಿ ಟಿ20 ವಿಶ್ವಕಪ್ ಗೆಲುವಿನ ರೂವಾರಿಗಳು..! ನೀವೇನಂತೀರಾ?
ಈ ವಿಶ್ವಕಪ್‌ನಲ್ಲಿ ಭಾರತದ ತೇರನ್ನು ಎಳೆದ ಕಣ್ಮಣಿಗಳ ಸಾಧನೆ ಏನು? ದಶಕಗಳ ಬಳಿಕ ಭಾರತದ ಐಸಿಸಿ ಟ್ರೋಫಿ ಗೆಲುವಿನ ಹಿಂದಿರುವ ಪ್ರಮುಖ ಆಟಗಾರರು ಯಾರು? ಕೊಟ್ಟ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸಿದರು? ಎಂಬುದರ ಕಿರು ಪರಿಚಯ ಇಲ್ಲಿದೆ.
ಬೆಂಗಳೂರು: ಭಾರತ ಟಿ20 ವಿಶ್ವಕಪ್ ಗೆದ್ದಿದ್ದರ ಹಿಂದಿನ ರೂವಾರಿಗಳು ಹಲವರಿದ್ದಾರೆ. 15 ಆಟಗಾರರ ಬೆನ್ನಿಗೆ 140 ಕೋಟಿ ಭಾರತೀಯರು ನಿಂತಿದ್ದರು. ಈ ವಿಶ್ವಕಪ್‌ನಲ್ಲಿ ಭಾರತದ ತೇರನ್ನು ಎಳೆದ ಕಣ್ಮಣಿಗಳ ಸಾಧನೆ ಏನು? ದಶಕಗಳ ಬಳಿಕ ಭಾರತದ ಐಸಿಸಿ ಟ್ರೋಫಿ ಗೆಲುವಿನ ಹಿಂದಿರುವ ಪ್ರಮುಖ ಆಟಗಾರರು ಯಾರು? ಕೊಟ್ಟ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸಿದರು? ಎಂಬುದರ ಕಿರು ಪರಿಚಯ ಇಲ್ಲಿದೆ.
ರೋಹಿತ್ ಶರ್ಮಾ(ನಾಯಕ)
ಪಂದ್ಯ: 8 । ರನ್: 248 । 100/50: 0/3 । 4/6: 22/15
ಟಿ20 ವಿಶ್ವ ಸಮರದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜೊತೆಗೆ ಆರಂಭಿಕನ ಜವಾಬ್ದಾರಿಯನ್ನೂ ನಿರ್ವಹಿಸಿದ ರೀತಿ ಎಲ್ಲರಿಗೂ ಮಾದರಿ ಆಗುವಂತಿತ್ತು. ಟೂರ್ನಿಯ ಅಗ್ರ-3 ರನ್ ಸರದಾರರ ಪಟ್ಟಿಯಲ್ಲಿ ಸ್ಥಾನ ಪಡೆದ ರೋಹಿತ್, ಅಗ್ರ-10 ಬ್ಯಾಟರ್‌ಗಳ ಪೈಕಿ 3ನೇ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿರುವುದನ್ನು ನೋಡಿದರೆ ಸಾಕು ಅವರ ಆಟ ಎಷ್ಟು ಪರಿಣಾಮಕಾರಿಯಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.
ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲೇ ಆರ್ಭಟಿಸಿದ್ದ ರೋಹಿತ್, ಆ ಬಳಿಕ 4 ಪಂದ್ಯಗಳಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧ ಅವರ ಆಟ ಎಂಥವರೂ ಹುಬ್ಬೇರಿಸುವಂತೆ ಮಾಡಿತು. ಪ್ರಚಂಡ ವೇಗಿಗಳನ್ನೂ ಅತ್ಯಾಕರ್ಷಕ ಹೊಡೆತಗಳ ಮೂಲಕ ದಂಡಿಸುತ್ತಿದ್ದ ರೀತಿ ಯುವ ಬ್ಯಾಟರ್‌ಗಳಿಗೆ ಸ್ಫೂರ್ತಿ ತುಂಬಿತು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸಿಡಿಸಿದ 57 ರನ್, ಭಾರತವನ್ನು ಫೈನಲ್‌ಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಸೂರ್ಯಕುಮಾರ್ ಯಾದವ್
ಪಂದ್ಯ: 07 । ರನ್: 196 । 100/50: 0/2 । 4/6: 15/10
ಈ ಅಂಕಿ-ಅಂಶಗಳು ದೊಡ್ಡದಾಗಿ ಕಾಣದಿದ್ದರೂ ಸೂರ್ಯಕುಮಾರ್‌ರ ಕೊಡುಗೆ ಸಣ್ಣದೇನಲ್ಲ. ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಸೂರ್ಯ ಅಮೆರಿಕ ಹಾಗೂ ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 31 ರನ್, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಹೊಡೆದ 47 ರನ್ ಭಾರತವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡಿದ್ದಲ್ಲದೇ ತಂಡವನ್ನು ಫೈನಲ್‌ಗೇರಿಸಿತು. ಫೀಲ್ಡಿಂಗ್‌ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಸೂರ್ಯ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕುಲ್ದೀಪ್ ಯಾದವ್
ಪಂದ್ಯ: 4 । ವಿಕೆಟ್: 10 । ಎಕಾನಮಿ: 5.87 । ಶ್ರೇಷ್ಠ ಪ್ರದರ್ಶನ: 3/19
ಕೆರಿಬಿಯನ್ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳೇ ಹೀರೋಗಳಾಗುತ್ತಾರೆ ಎಂದರಿತಿದ್ದ ನಾಯಕ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್‌ರನ್ನು ಸೂಪರ್-8 ಹಾಗೂ ನಾಕೌಟ್ ಪಂದ್ಯಗಳಲ್ಲಿ ತಂಡದ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡರು. ಪ್ರತಿ ಬಾರಿಯೂ ಎದುರಾಳಿ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರುತ್ತಿದ್ದಾರೆ, ಒಂದು ಅಪಾಯಕಾರಿ ಜೊತೆಯಾಟ ಮೂಡುತ್ತಿದೆ ಎಂದಾಗ ರೋಹಿತ್‌ಗೆ ನೆನಪಾಗುತ್ತಿದ್ದಿದ್ದೇ ಕುಲ್ದೀಪ್. ಗುಂಪು ಹಂತದಲ್ಲಿ ಬೆಂಚ್ ಕಾಯ್ದಿದ್ದ ಕುಲ್ದೀಪ್, ಸೂಪರ್-8ರ 2 ಪಂದ್ಯಗಳಲ್ಲಿ 5 ವಿಕೆಟ್ ಕಿತ್ತರು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಕುಲ್ದೀಪ್, ತಮ್ಮ ಕೌಶಲ್ಯದ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಜಸ್‌ಪ್ರೀತ್ ಬುಮ್ರಾ
ಪಂದ್ಯ: 7 । ವಿಕೆಟ್: 13 । ಎಕಾನಮಿ: 4.12 । ಶ್ರೇಷ್ಠ ಪ್ರದರ್ಶನ: 3/7
ಬುಮ್ರಾ ಈ ವಿಶ್ವಕಪ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು. ತಂಡದ ಯಶಸ್ಸಿನಲ್ಲಿ ಅವರ ಕೊಡುಗೆಯನ್ನು ಕೇವಲ ಅಕ್ಷರಗಳಲ್ಲಿ ಬರೆದು ವಿವರಿಸಲು ಸಾಧ್ಯವೇ ಇಲ್ಲ. ತಮ್ಮ ಮೊನಚು ದಾಳಿಯ ಮೂಲಕವೇ ಬುಮ್ರಾ ಎದುರಾಳಿ ಬ್ಯಾಟರ್‌ಗಳಲ್ಲಿ ನಡುಕ ಹುಟ್ಟಿಸಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಂತೂ ಬೂಮ್ರಾ ಬೆಂಕಿಯಾದರು. ಸೋಲಬೇಕಿದ್ದ ಪಂದ್ಯವನ್ನು ತಮ್ಮ ಪ್ರಚಂಡ ದಾಳಿಯ ಮೂಲಕ ಭಾರತದ ಕಡೆಗೆ ವಾಲಿಸಿದ್ದು ಪವಾಡವೇ ಸರಿ. ಎದುರಾಳಿ ತಂಡದ ಅಪಾಯಕಾರಿ ಬ್ಯಾಟರ್‌ಗಳನ್ನೇ ಟಾರ್ಗೆಟ್ ಮಾಡಿ ಪೆವಿಲಿಯನ್‌ಗೆ ಅಟ್ಟುತ್ತಿದ್ದ ಬುಮ್ರಾ, ಅಭಿಮಾನಿಗಳ ಕಣ್ಣಲ್ಲಿ ಮತ್ತೊಮ್ಮೆ ಹೀರೋ ಆಗಿ ಕಾಣಿಸಿಕೊಂಡರು.
ಹಾರ್ದಿಕ್ ಪಾಂಡ್ಯ
ಪಂದ್ಯ: 07 । ವಿಕೆಟ್: 08 । ಶ್ರೇಷ್ಠ ಪ್ರದರ್ಶನ: 3/27। ರನ್: 139
ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತವೆ ಎಂಬುದು ಸದ್ಯ ಹಾರ್ದಿಕ್‌ಗೆ ಹೆಚ್ಚು ಸೂಕ್ತವಾಗುತ್ತದೆ. ಐಪಿಎಲ್ ವೇಳೆ ಅವರು ಎದುರಿಸಿದ ಟೀಕೆ, ಅನುಭವಿಸಿದ ನೋವು ಯಾವ ಅಥ್ಲೀಟ್‌ಗೂ ಬೇಡ ಎನ್ನುವಂತಿತ್ತು. ಆದರೆ ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಹಾರ್ದಿಕ್, ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿದ್ದರ ಹಿಂದಿರುವ ಪ್ರಮುಖ ಶಕ್ತಿ. ಗುಂಪು ಹಂತದ 3 ಪಂದ್ಯಗಳಲ್ಲೂ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್, ಸೂಪರ್-8 ಬಳಿಕ ಬ್ಯಾಟಿಂಗ್‌ನಲ್ಲೂ ಸ್ಫೋಟಿಸತೊಡಗಿದರು. ಈ ಮೂಲಕ ತಮ್ಮ ಮೇಲಿನ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಂಡರು.
ಅರ್ಶ್‌ದೀಪ್ ಸಿಂಗ್
ಪಂದ್ಯ: 7 । ವಿಕೆಟ್: 15 । ಎಕಾನಮಿ: 7.50 । ಶ್ರೇಷ್ಠ ಪ್ರದರ್ಶನ: 4/9
ಈ ವಿಶ್ವಕಪ್‌ನಲ್ಲಿ ಅರ್ಶ್‌ದೀಪ್ ಸಿಂಗ್‌ರ ಸಾಧನೆಗೆ ತಕ್ಕ ಪ್ರಚಾರ ಸಿಗದೇ ಹೋಗಿರಬಹುದು. ಆದರೆ ತಂಡದ ಟ್ರೋಫಿ ಗೆಲುವಿನ ಹಿಂದೆ ಅವರ ಕೊಡುಗೆ ವಿವರಿಸಲಾಗದ್ದು. ಆರಂಭಿಕ ಸ್ಪೆಲ್‌ನಲ್ಲಿ ಅವರು ಬೀರುತ್ತಿದ್ದ ಪರಿಣಾಮ ಪಂದ್ಯದ ಗತಿಯನ್ನೇ ಬದಲಿಸುತ್ತಿತ್ತು. ಗುಂಪು ಹಂತದಲ್ಲಿ ಅಮೆರಿಕ ವಿರುದ್ಧ 9 ರನ್‌ಗೆ 4 ವಿಕೆಟ್ ಕಿತ್ತು ಹೊಸ ದಾಖಲೆಯನ್ನೇ ಬರೆದರು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಹೊರತುಪಡಿಸಿ ಇತರೆಲ್ಲಾ ಪಂದ್ಯಗಳಲ್ಲೂ ವಿಕೆಟ್ ಕಿತ್ತು ವಿಶ್ವಕಪ್ ಗೆಲುವಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು.
ಅಕ್ಷರ್ ಪಟೇಲ್
ಪಂದ್ಯ: 7 । ವಿಕೆಟ್: 8 । ಎಕಾನಮಿ: 6.88 । ಶ್ರೇಷ್ಠ ಪ್ರದರ್ಶನ: 3/23
ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಹೀರೋ ಅಕ್ಷರ್ ಪಟೇಲ್. ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು ಎಂಬ ಕಾರಣಕ್ಕೆ ಹೆಚ್ಚುವರಿ ಸ್ಪಿನ್ನರ್ ಆಗಿ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಿದ್ದ ಅಕ್ಷರ್ ನಿರೀಕ್ಷೆಗೆ ತಕ್ಕಂತೆ ಆಟವಾಡಿದರು. ರನ್ ಬಿಟ್ಟುಕೊಡಲು ಚೌಕಾಸಿ ಮಾಡುತ್ತಿದ್ದ ಅಕ್ಷರ್, ಬಾಂಗ್ಲಾ ವಿರುದ್ಧ ಹೊರತುಪಡಿಸಿ ಉಳಿದೆಲ್ಲಾ ಪಂದ್ಯದಲ್ಲೂ ವಿಕೆಟ್ ಉರುಳಿಸಿದರು. ಅಮೋಘ ಫೀಲ್ಡಿಂಗ್ ಮೂಲಕವೂ ಗಮನಸೆಳೆದರು. ಇಂಗ್ಲೆಂಡ್ ಪಂದ್ಯದಲ್ಲಿ ಅಪಾಯಕಾರಿ ಬ್ಯಾಟರ್‌ಗಳನ್ನು ಪೆವಿಲಿಯನ್‌ಗಟ್ಟಿದ ಅಕ್ಷರ್, ತಂಡವನ್ನು ಫೈನಲ್‌ಗೇರಿಸಿದರು.
ಗೆಲುವಿಗೆ ರಿಷಭ್, ದುಬೆ ಕೊಡುಗೆ
ಭಾರತ ಗೆಲುವಿಗೆ ಕೊಡುಗೆ ನೀಡಿದ ಇನ್ನೂ ಕೆಲ ಆಟಗಾರರಿದ್ದಾರೆ. ಅವರಲ್ಲಿ ರಿಷಭ್ ಪಂತ್, ಶಿವಂ ದುಬೆ ಪ್ರಮುಖರು. ಎಲ್ಲಾ ಪಂದ್ಯಗಳಲ್ಲಿ ಮಿಂಚದಿದ್ದರೂ, ಕೆಲ ಪಂದ್ಯಗಳ ನಿರ್ಣಾಯಕ ಹಂತಗಳಲ್ಲಿ ಅಬ್ಬರಿಸಿ ತಂಡವನ್ನು ಗೆಲ್ಲಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಕಡಿಮೆ ಮೊತ್ತದ ಥ್ರಿಲ್ಲರ್‌ನಲ್ಲಿ ರಿಷಭ್ ಗಳಿಸಿದ 42 ರನ್, ತಂಡದ ಪಾಲಿಗೆ ಅತ್ಯಮೂಲ್ಯ. ಬಾಂಗ್ಲಾದೇಶ, ಐರ್ಲೆಂಡ್ ವಿರುದ್ಧ ತಲಾ 36 ರನ್ ಹೊಡೆದ ಅವರು, ಟೂರ್ನಿಯಲ್ಲಿ 10ಕ್ಕಿಂತ ಹೆಚ್ಚು ಕ್ಯಾಚ್ ಕೂಡಾ ಪಡೆದರು. ದುಬೆ ಕೂಡಾ ಕೆಲ ಪಂದ್ಯಗಳಲ್ಲಿ ತಂಡಕ್ಕೆ ನೆರವಾದರು. ಬಾಂಗ್ಲಾದೇಶ ವಿರುದ್ಧ 34, ಆಸ್ಟ್ರೇಲಿಯಾ ವಿರುದ್ಧ 28 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಯಶಸ್ವಿಯಾದರು.