ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ರೋಚಕ ಘಟ್ಟದಲ್ಲಿದೆ. 162 ರನ್ ಗುರಿ ಬೆನ್ನಟ್ಟುತ್ತಿರುವ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದಿದ್ದಾರೆ. ಭಾರತದ ಎರಡನೇ ಇನ್ನಿಂಗ್ಸ್ 157ಕ್ಕೆ ಅಂತ್ಯಗೊಂಡಿದ್ದು, ಬೊಲೆಂಡ್ 6 ವಿಕೆಟ್ ಕಬಳಿಸಿದರು.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯದ ಸಿಡ್ನಿ ಟೆಸ್ಟ್ ಪಂದ್ಯವು ಮೂರನೇ ದಿನದಲ್ಲೇ ಮುಕ್ತಾಯವಾಗುವ ಲಕ್ಷಣವಿದೆ. ಗೆಲ್ಲಲು 162 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ತಂಡವು ಲಂಚ್ ಬ್ರೇಕ್ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 71 ರನ್ ಬಾರಿಸಿದೆ. ಕನ್ನಡಿಗ ಪ್ರಸಿದ್ದ್ ಕೃಷ್ಣ ಮೂರು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದಾರೆ. ಭಾರತಕ್ಕೆ ಸಿಡ್ನಿ ಟೆಸ್ಟ್ ಗೆಲ್ಲಲು ಇನ್ನು 7 ವಿಕೆಟ್ ಅಗತ್ಯವಿದ್ದರೇ, ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ 91 ರನ್‌ಗಳ ಅಗತ್ಯವಿದೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯವು ರೋಚಕಘಟ್ಟ ತಲುಪಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 157 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದಲ್ಲಿ ತನ್ನ ಖಾತೆಗೆ ಕೇವಲ 16 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಮೇಲಿಟ್ಟ ನಿರೀಕ್ಷೆ ಹುಸಿಯಾಯಿತು.
ರೋಹಿತ್ ಶರ್ಮಾ ತಲೆದಂಡವಾದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈತನೇ ಟೀಂ ಇಂಡಿಯಾ ಕ್ಯಾಪ್ಟನ್!
ಆಸ್ಟ್ರೇಲಿಯಾ ಪರ ಮಾರಕ ದಾಳಿ ನಡೆಸಿದ ಸ್ಕಾಟ್ ಬೊಲೆಂಡ್ 45 ರನ್ ನೀಡಿ 6 ವಿಕೆಟ್ ಕಬಳಿಸಿದರು. ಬೊಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲೂ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಇನ್ನು ನಾಯಕ ಪ್ಯಾಟ್ ಕಮಿನ್ಸ್ 3 ಹಾಗೂ ವೆಬ್‌ಸ್ಟರ್ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಇನ್ನು ಗೆಲ್ಲಲು 162 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮೊದಲ ಎರಡು ಓವರ್‌ನಲ್ಲೇ 26 ರನ್ ಗಳಿಸುವ ಮೂಲಕ ಸ್ಪೋಟಕ ಆರಂಭ ಪಡೆಯುವ ಸೂಚನೆ ನೀಡಿತು. ಆದರೆ ನೀಳಕಾಯದ ವೇಗಿ ಪ್ರಸಿದ್ಧ್ ಕೃಷ್ಣ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್(22) ಅವರನ್ನು ಬಲಿ ಪಡೆಯುವ ಮೂಲಕ ಭಾರತಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು. ಇನ್ನು ಮಾರ್ನಸ್ ಲಬುಶೇನ್(6) ಹಾಗೂ ಸ್ಟೀವ್ ಸ್ಮಿತ್(4) ಅವರನ್ನು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಪ್ರಸಿದ್ದ್ ಯಶಸ್ವಿಯಾದರು.
ನಾನು ಟೆಸ್ಟ್‌ನಿಂದ ನಿವೃತ್ತಿಯಾಗಲ್ಲ; ಗಾಳಿ ಸುದ್ದಿಗೆ ತೆರೆ ಎಳೆದ ರೋಹಿತ್ ಶರ್ಮಾ!
ಸದ್ಯ ಆಸ್ಟ್ರೇಲಿಯಾದ ಮತ್ತೋರ್ವ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ(19) ಹಾಗೂ ಟ್ರ್ಯಾವಿಸ್ ಹೆಡ್(5) ಕ್ರೀಸ್‌ನಲ್ಲಿದ್ದು, ಫಲಿತಾಂಶ ಯಾವ ತಂಡದ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
