ಭಾರತ-ಪಾಕ್ ಪಂದ್ಯ ಮತ್ತೊಮ್ಮೆ ನೋಡಲು ಇದೆ ಚಾನ್ಸ್‌ಇಂದು ಸಂಜೆ 8 ಗಂಟೆಯಿಂದ ಇಂಡೋ-ಪಾಕ್ ಪಂದ್ಯ ಮರು ಪ್ರಸಾರಪಾಕಿಸ್ತಾನ ವಿರುದ್ದ 4 ವಿಕೆಟ್ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

 ಬೆಂಗಳೂರು(ಅ.24): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಕ್ಷರಶಃ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಅಕ್ಟೋಬರ್ 23ರಂದು ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಎಂಸಿಜಿ ಮೈದಾನದಲ್ಲಿಯೇ ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಳ್ಳುವಲ್ಲಿ ಯಶಸ್ವಿಯಾದರು.

ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಮಂದಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇನ್ನೂ ಕೆಲವು ಮಂದಿ ನಾನಾ ಕಾರಣಗಳಿಂದ ಸಂಪೂರ್ಣ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂತಹ ನತದೃಷ್ಟ ಅಭಿಮಾನಿಗಳ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಅಂದರೆ ಅಕ್ಟೋಬರ್ 24ರ ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಮರುಪ್ರಸಾರ ಮಾಡಲು ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ತೀರ್ಮಾನಿಸಿದೆ. ಹೀಗಾಗಿ ಮೊದಲಿನಿಂದ ಕ್ರಿಕೆಟ್‌ ಅಭಿಮಾನಿಗಳು ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಪಂದ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.

He walked in. He batted. He took India to victory.#ReLive this #ViratKohli classic along with the full match:

Today, 8 PM | Star Sports 1/1HD/1 Hindi/1HD Hindi

PS. You can't afford to miss this one.pic.twitter.com/255rbjUkoP

— Star Sports (@StarSportsIndia) October 24, 2022

ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದ ಪ್ರತಿ ಎಸೆತವನ್ನು ಕ್ರಿಕೆಟ್ ಅಭಿಮಾನಿಗಳು ಇದೀಗ ಇಂದು ಸಂಜೆ(ಅ.24) 8 ಗಂಟೆಯಿಂದ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. 

ಏಕಕಾಲಕ್ಕೆ 1.8 ಕೋಟಿ ವೀಕ್ಷಕರು: ಹಾಟ್‌ಸ್ಟಾರ್‌ನಲ್ಲಿ ಹೊಸ ದಾಖಲೆ.

ಭಾನುವಾರ ಭಾರತ-ಪಾಕ್‌ ಪಂದ್ಯ ಹಾಟ್‌ಸ್ಟಾರ್‌ನಲ್ಲಿ ಹೊಸ ದಾಖಲೆ ಬರೆಯಿತು. ಪಂದ್ಯದ ಆರಂಭದಲ್ಲೇ 1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಭಾರತದ ಚೇಸಿಂಗ್‌ ವೇಳೆ ಕೊನೆ ಓವರಲ್ಲಿ 1.8 ಕೋಟಿ ದಾಟಿತ್ತು. ಇದು ಈವರೆಗಿನ ಹೊಸ ದಾಖಲೆ. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ನಡೆದ ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯವನ್ನು ಏಕಕಾಲಕ್ಕೆ 1.3 ಕೋಟಿ ಮಂದಿ ವೀಕ್ಷಿಸಿದ್ದರು.

Ind vs Pak ಕೊನೆಯ ಓವರ್‌ನಲ್ಲಿ ಚೆಂಡು ವಿಕೆಟ್‌ಗೆ ಬಡಿದರೂ ಟೀಂ ಇಂಡಿಯಾಗೆ ಬೈಸ್ ಮೂಲಕ 3 ರನ್ ಸಿಕ್ಕಿದ್ದು ಯಾಕೆ..? ರೂಲ್ಸ್ ಏನು?

90,293 ಪ್ರೇಕ್ಷಕರು!

ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ 90,293 ಮಂದಿ ಉಪಸ್ಥಿತರಿದ್ದರು. 1 ಲಕ್ಷ ಆಸನ ಸಾಮರ್ಥ್ಯದ, ವಿಶ್ವದ 2ನೇ ಅತಿ ದೊಡ್ಡ ಕ್ರೀಡಾಂಗಣದಲ್ಲಿ 2015ರ ಏಕದಿನ ವಿಶ್ವಕಪ್‌ನ ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವಿನ ಫೈನಲ್‌ ಪಂದ್ಯವನ್ನು 93,013 ಮಂದಿ ವೀಕ್ಷಿಸಿದ್ದು, ಈವರೆಗಿನ ದಾಖಲೆಯಾಗಿಯೇ ಉಳಿದಿದೆ.

ಹೇಗಿತ್ತು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ..?:

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹಮ್ಮದ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿತ್ತು. ಭಾರತ ಪರ ಆರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. 

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಹ್ಯಾರಿಸ್ ರೌಫ್ ಮಾರಕ ದಾಳಿಗೆ ತತ್ತರಿಸಿ 31 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆದರೆ 5ನೇ ವಿಕೆಟ್‌ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಸಮಯೋಚಿತ 113 ರನ್‌ಗಳ ಜತೆಯಾಟ ನಿಭಾಯಿಸಿದರು. ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲೇ ತಾವೊಬ್ಬ ಚಾಂಪಿಯನ್ ಆಟಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.