ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವೂ ಆತಿಥೇಯ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ಟೆಸ್ಟ್ ಗೆಲ್ಲಲು 515 ರನ್‌ಗಳ ಕಠಿಣ ಗುರಿ ಬೆನ್ನತ್ತಿರುವ ಪ್ರವಾಸಿ ಬಾಂಗ್ಲಾದೇಶ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿದ್ದು, ಇನ್ನೂ ಗೆಲ್ಲಲು 357 ರನ್ ಗಳಿಸಬೇಕಿದೆ. ಇನ್ನೊಂದೆಡೆ ಭಾರತ ಮೊದಲ ಟೆಸ್ಟ್ ಗೆಲ್ಲಲು ಇನ್ನು ಕೇವಲ 6 ಬಲಿ ಪಡೆಯಬೇಕಿದೆ.
ಗೆಲ್ಲಲು ಕಠಿಣ ಗುರಿ ಬೆನ್ನತ್ತಿರುವ ಬಾಂಗ್ಲಾದೇಶ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟರ್‌ಗಳಾದ ಝಾಕಿರ್ ಹಸನ್ ಹಾಗೂ ಶದಮನ್ ಇಸ್ಲಾಂ ಜೋಡಿ ಮೊದಲ ವಿಕೆಟ್‌ಗೆ 62 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮತ್ತೊಮ್ಮೆ ಜಸ್ಪ್ರೀತ್ ಬುಮ್ರಾ ಯಶಸ್ವಿಯಾದರು. ಝಾಕಿರ್ 33 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಜೈಸ್ವಾಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಒನ್‌ಡೇ ಕ್ರಿಕೆಟ್‌ನಲ್ಲಿ 300+ ಮೇಡನ್ ಓವರ್ ಮಾಡಿದ ಜಗತ್ತಿನ ಏಕೈಕ ಬೌಲರ್ ಇವರು!
ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಶದಮನ್ ಇಸ್ಲಾಂ(35) ಅವರನ್ನು ಬಲಿ ಪಡೆಯುವಲ್ಲಿ ರವಿಚಂದ್ರನ್ ಅಶ್ವಿನ್ ಯಸಸ್ವಿಯಾದರು. ಇನ್ನು ತಲಾ 13 ರನ್ ಬಾರಿಸಿದ್ದ ಮೊಮಿನುಲ್ ಹಕ್ ಹಾಗೂ ಮುಷ್ಫಿಕುರ್ ರಹೀಂ ಅವರಿಗೂ ಲೋಕಲ್ ಹೀರೋ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು.
ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸಾಕಷ್ಟು ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿರುವ ನಾಯಕ ನಜ್ಮುಲ್ ಹೊಸೈನ್ ಶಾಂತೋ 60 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ 5 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಗಿಲ್-ಪಂತ್ ಅಮೋಘ ಶತಕ; ಚೆನ್ನೈ ಟೆಸ್ಟ್ ಗೆಲ್ಲಲು ಬಾಂಗ್ಲಾಗೆ ಕಠಿಣ ಗುರಿ ಕೊಟ್ಟ ಭಾರತ
ಇನ್ನೂ ಮೊದಲು 3 ವಿಕೆಟ್ ಕಳೆದು 81 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಆಸರೆಯಾದರು. ಗಿಲ್ 176 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 119 ರನ್ ಗಳಿಸಿ ಅಜೇಯರಾಗುಳಿದರೆ, ರಿಷಭ್ ಪಂತ್ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
