ಜಮ್ಮು(ಫೆ.22): 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶಿಸಲಿದೆಯೋ ಇಲ್ಲವೋ ಎನ್ನುವ ಗೊಂದಲ ಶುರುವಾಗಿದೆ. ಮಂದ ಬೆಳಕು, ಮಳೆ ಕಾರಣ ಇಲ್ಲಿ ಜಮ್ಮು-ಕಾಶ್ಮೀರ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲ ದಿನ ಕೇವಲ 6 ಓವರ್‌ಗಳ ಆಟ ನಡೆದಿತ್ತು. 

ಆದರೆ 2ನೇ ದಿನವಾದ ಶುಕ್ರವಾರ ಆಟ ಆರಂಭಗೊಳ್ಳಲಿಲ್ಲ. ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಇಲ್ಲಿನ ಗಾಂಧಿ ಕಾಲೇಜು ಮೈದಾನದಲ್ಲಿ ನೀರು ನಿಂತಿತ್ತು. ಪಿಚ್‌ಗೆ ಹೊದಿಸಿದ್ದ ಹೊದಿಕೆಯಿಂದ ನೀರು ಸೋರಿದ ಕಾರಣ, ಪಿಚ್‌ ಒದ್ದೆಯಾಗಿತ್ತು. ಪಿಚ್‌ ಒಣಗಿಸಲು ಮೈದಾನ ಸಿಬ್ಬಂದಿ ಹರಸಾಹಸ ಪಟ್ಟರು. 5 ಬಾರಿ ಅಂಪೈರ್‌ಗಳು ಪರಿಶೀಲನೆ ನಡೆಸಿದರು. ಆದರೆ ಮೈದಾನ ಆಟಕ್ಕೆ ಯೋಗ್ಯವಾಗಿರಲಿಲ್ಲ. ಚರಂಡಿ ವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಇರುವ ಕಾರಣ ಮೈದಾನ ಸಿಬ್ಬಂದಿ ಅಸಹಾಯಕರಾದರು. ದಿನವಿಡೀ ಬಿಸಿಲಿದ್ದರೂ, ಮೈದಾನದಿಂದ ನೀರು ಹೊರಹಾಕಿ ಆಟ ಆರಂಭಿಸಲು ಸಾಧ್ಯವಾಗಲಿಲ್ಲ.

ರಣಜಿ ಟೂರ್ನಿ ಕ್ವಾರ್ಟರ್‌ಗೆ ಬೆಳಕು ಅಡ್ಡಿ

2ನೇ ದಿನದ ಮುಕ್ತಾಯಕ್ಕೆ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 14 ರನ್‌ ಗಳಿಸಿದೆ. ಲೀಗ್‌ ಹಂತದಲ್ಲಿ ತಂಡಗಳು ಸಾಧಿಸಿದ ಗೆಲುವಿನ ಲೆಕ್ಕಾಚಾರದ ಮೇಲೆ ಸೆಮಿಫೈನಲ್‌ ಪ್ರವೇಶಿಸುವ ತಂಡವನ್ನು ಆಯ್ಕೆ ಮಾಡಿದರೆ, ಕರ್ನಾಟಕವನ್ನು ಹಿಂದಿಕ್ಕಿ ಜಮ್ಮು-ಕಾಶ್ಮೀರ ಮುನ್ನಡೆಯಲಿದೆ. ಆದರೆ ಬಿಸಿಸಿಐ ಯಾವ ಮಾನದಂಡವನ್ನು ಅನುಸರಿಸಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಸ್ಕೋರ್‌: ಕರ್ನಾಟಕ (2ನೇ ದಿನದಂತ್ಯಕ್ಕೆ) 14/2