ತಂದೆ ರಾಹುಲ್ ದ್ರಾವಿಡ್ ಅವರಂತೆಯೇ ಆಕರ್ಷಕ ಬೌಂಡರಿ ಬಾರಿಸುವ ವಿಡಿಯೋ ಕ್ಲಿಪ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದ್ರಾವಿಡ್ ಮಗನ ಆಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಸುರಿಯುತ್ತಿದೆ.
ಬೆಂಗಳೂರು(ಡಿ.21): ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಕೋಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಎದುರಿನ ಪಂದ್ಯದಲ್ಲಿ ಸಮಿತ್ ದ್ರಾವಡ್ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 98 ರನ್ ಸಿಡಿಸಿ ಮಿಂಚಿದರು. ಆದರೆ ಕೇವಲ 2 ರನ್ ಅಂತರದಲ್ಲಿ ಆಕರ್ಷಕ ಶತಕ ಬಾರಿಸುವ ಅವಕಾಶ ಕೈಚೆಲ್ಲಿದರು. ಸಮಿತ್ ದ್ರಾವಿಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಜಮ್ಮು ಮತ್ತು ಕಾಶ್ಮೀರ ತಂಡದ ಎದುರು ಇನಿಂಗ್ಸ್ ಹಾಗೂ 130 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ತಂದೆ ರಾಹುಲ್ ದ್ರಾವಿಡ್ ಅವರಂತೆಯೇ ಆಕರ್ಷಕ ಬೌಂಡರಿ ಬಾರಿಸುವ ವಿಡಿಯೋ ಕ್ಲಿಪ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದ್ರಾವಿಡ್ ಮಗನ ಆಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಸುರಿಯುತ್ತಿದೆ.
ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮ್ಮು ಮತ್ತು ಕಾಶ್ಮೀರ 170 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಕರ್ನಾಟಕ ಪರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸಮಿತ್ ದ್ರಾವಿಡ್ ನಾಲ್ಕನೇ ವಿಕೆಟ್‌ಗೆ ಕಾರ್ತಿಕೇಯ ಕೆ.ಪಿ. ಅವರ ಜತೆಗೂಡಿ 233 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿದರು. ಕಾರ್ತಿಕೇಯ 175 ಎಸೆತಗಳನ್ನು ಎದುರಿಸಿ 163 ರನ್ ಸಿಡಿಸಿದರು.
ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್‌ಗೆ ಮುಂಬೈ ನಾಯಕತ್ವ ಪಟ್ಟ ಕಟ್ಟಿದ್ದೇಕೆ? ಗುಟ್ಟು ಬಿಚ್ಚಿಟ್ಟ ಜಯವರ್ಧನೆ
ಇನ್ನು ಕರ್ನಾಟಕ ತಂಡವು 100 ಓವರ್ ಬ್ಯಾಟಿಂಗ್ ಮಾಡಿ 5 ವಿಕೆಟ್ ಕಳೆದುಕೊಂಡು 480 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಅಲ್ಪಮೊತ್ತಕ್ಕೆ ಸರ್ವಪತನ ಕಂಡಿದ್ದರಿಂದ ಕರ್ನಾಟಕ ತಂಡವು ಮತ್ತೊಮ್ಮೆ ಎರಡನೇ ಇನಿಂಗ್ಸ್ ಆಡುವ ಪ್ರಮೇಯವೇ ಬರಲಿಲ್ಲ.
ಇನ್ನು ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಹಾಗೂ ಪತ್ನಿ ವಿಜೇತ ಮೈಸೂರಿನಲ್ಲಿ ನಡೆದ ಉತ್ತರಖಂಡ ಎದುರಿನ ಪಂದ್ಯದ ವೇಳೆ ಮಗನ ಆಟವನ್ನು ಮೈದಾನಕ್ಕೆ ಬಂದು ಕಣ್ತುಂಬಿಕೊಂಡಿದ್ದರು. ಸದ್ಯ ಐಸಿಸಿ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ನ್ಯಾಷನಲ್ ಡ್ಯೂಟಿಯಿಂದ ಬಿಡುವು ಪಡೆದುಕೊಂಡಿದ್ದು, ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ವೇಳೆಗೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.
