ಮುಂಬೈ[ಡಿ.10]: ಭಾರತ-ವೆಸ್ಟ್ ಇಂಡೀಸ್ ನಡುವಿನ ಚುಟುಕು ಕ್ರಿಕೆಟ್ ಸರಣಿ ರೋಚಕಘಟ್ಟ ಪ್ರವೇಶಿದ್ದು, ನಿರ್ಣಾಯಕ ಪಂದ್ಯದಲ್ಲಿ ಸರಣಿಯನ್ನು ಯಾರು ಕೈವಶ ಮಾಡಿಕೊಳ್ಳಬಹುದು ಎನ್ನುವ ಕುತೂಹಲ ಜೋರಾಗಿದೆ. 

ಟೀಂ ಇಂಡಿಯಾಗೆ ಶಾಕ್; 2ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ವಿಂಡೀಸ್!

ಹೌದು, ಹೈದರಾಬಾದ್’ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್’ಗಳ ಅಂತರದ ಜಯ ದಾಖಲಿಸಿದರೆ, ವಿಶಾಖಪಟ್ಟಣಂನಲ್ಲಿ ಎರಡನೇ ಟಿ20 ಪಂದ್ಯವನ್ನು ವಿಂಡೀಸ್ ಪಡೆ ಗೆಲ್ಲುವುದರೊಂದಿಗೆ ಸರಣಿ ಸಮಬಲ ಮಾಡಿಕೊಂಡಿದೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಡಿಸೆಂಬರ್ 11ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 2 ಬದಲಾವಣೆಗೆ ಕೈಹಾಕುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಆಯ್ಕೆ ಮಾಡಿದ ಸಂಭಾವ್ಯ ತಂಡ ಹೀಗಿದೆ ನೋಡಿ.

ಟೀಂ ಇಂಡಿಯಾ ಸೋಲಿಗೆ ಇವರೇ ಕಾರಣ: ಕೊಹ್ಲಿ ಮಾತು..!

ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಇಲ್ಲವೇ ಶಿವಂ ದುಬೆ ಕಣಕ್ಕಿಳಿಯಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್’ಗಿಳಿಯಲಿದ್ದಾರೆ. ಇನ್ನು ಮೊದಲೆರಡು ಟಿ20 ಪಂದ್ಯಗಳಲ್ಲಿ ಕೀಪಿಂಗ್’ನಲ್ಲಿ ಎಡವಿದ್ದ ರಿಷಭ್ ಪಂತ್ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್’ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಕಳೆದೆರಡು ಟಿ20 ಸರಣಿಯಲ್ಲಿ ಬೆಂಚ್ ಕಾಯಿಸಿರುವ ಪಂತ್’ಗೆ ಅವಕಾಶ ಸಿಕ್ಕರೆ ಅಚ್ಚರಿಪಡಬೇಕಿಲ್ಲ. ಇನ್ನುಳಿದಂತೆ ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಜತೆ ದುಬೆ ಇರುವುದರಿಂದ ಮತ್ತೋರ್ವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಟ್ಟು ಇನ್ನೊಬ್ಬ ತಜ್ಞ ವೇಗಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಹೀಗೇನಾದರೂ ಕೊಹ್ಲಿ ತೀರ್ಮಾನಿಸಿದರೆ ವೇಗಿ ಮೊಹಮ್ಮದ್ ಶಮಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇನ್ನುಳಿದಂತೆ ದೀಪಕ್ ಚಹರ್, ಭುವನೇಶ್ವರ್ ಕುಮಾರ್ ಹಾಗೂ ಯುಜುವೇಂದ್ರ ಚಹಲ್ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದೆ.

ಸುವರ್ಣ ನ್ಯೂಸ್.ಕಾಂ ಆಯ್ದುಕೊಂಡ ಸಂಭಾವ್ಯ ತಂಡ ಇಲ್ಲಿದೆ ನೋಡಿ:

ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್/ಪಂತ್, ರವೀಂದ್ರ ಜಡೇಜಾ, ಸುಂದರ್/ಶಮಿ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯುಜುವೇಂದ್ರ ಚಹಲ್.