Asianet Suvarna News Asianet Suvarna News

ಆರಂಭಿಕರ ಸ್ಥಾನಕ್ಕೆ ಪೈಪೋಟಿ; ಟೀಂ ಇಂಡಿಯಾ ಸೇರಿಕೊಂಡ ಪೃಥ್ವಿ ಶಾ!

ಭಾರತ ‘ಎ’ ತಂಡದ ಪರ ನ್ಯೂಜಿಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ ಇದೀಗ ಟೀಂ ಇಂಡಿಯಾ ಆರಂಭಿಕರ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ತಂಡಕ್ಕೆ ಆಯ್ಕೆಯಾಗೋ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಮತ್ತೆ ಪಲ್ಲಟವಾಗಲಿದೆ. 

prithvi shaw included team india for new Zealand odi series
Author
Bengaluru, First Published Jan 23, 2020, 9:52 AM IST

ನವದೆಹಲಿ(ಜ.23): ಭಾರತ ತಂಡದಲ್ಲಿ ಆರಂಭಿಕನ ಸ್ಥಾನಕ್ಕೆ ಪೈಪೋಟಿ ಹೊಸದೇನಲ್ಲ. ರೋಹಿತ್‌ ಶರ್ಮಾ ಕಾಯಂ ಸ್ಥಾನ ಪಡೆದರೆ, ಶಿಖರ್‌ ಧವನ್‌ ಹಾಗೂ ಕೆ.ಎಲ್‌.ರಾಹುಲ್‌ ನಡುವೆ ಸ್ಪರ್ಧೆ ಏರ್ಪಡುತ್ತಲೇ ಇರುತ್ತದೆ. ಇದೀಗ ಆ ಸ್ಪರ್ಧೆಗೆ ಅಂಡರ್‌-19 ವಿಶ್ವಕಪ್‌ ವಿಜೇತ ನಾಯಕ ಪೃಥ್ವಿ ಶಾ ಸಹ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: ಶಿಖರ್ ಧವನ್ ಇಂಜುರಿಯಿಂದ ಯಾರಿಗೆಲ್ಲಾ ಲಾಭ? ಆರಂಭಿಕ ಸ್ಥಾನಕ್ಕೆ ಪೈಪೋಟಿ!..

ಶಿಖರ್‌ ಧವನ್‌ ಗಾಯಗೊಂಡು ಹೊರಬಿದ್ದ ಕಾರಣ, ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿದೆ. ಪೃಥ್ವಿ ಈಗಾಗಲೇ ನ್ಯೂಜಿಲೆಂಡ್‌ನಲ್ಲಿದ್ದು, ಭಾರತ ‘ಎ’ ತಂಡದ ಪರ ಆಡುತ್ತಿದ್ದಾರೆ. ನ್ಯೂಜಿಲೆಂಡ್‌ ಇಲೆವೆನ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್‌ ಸಿಡಿಸಿದ್ದ ಪೃಥ್ವಿ, ಬುಧವಾರ ನಡೆದ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೊದಲ ಪಂದ್ಯದಲ್ಲಿ 35 ಎಸೆತಗಳಲ್ಲಿ 48 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

ಫೆ.5ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯಲ್ಲಿ ಪೃಥ್ವಿ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಹೇಗಿದ್ದರೂ, ಕೆ.ಎಲ್‌.ರಾಹುಲ್‌ ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಆಡುತ್ತಾರೆ. ಅವರನ್ನು 5ನೇ ಕ್ರಮಾಂಕದಲ್ಲಿ ಆಡಿಸಿದರೆ ತಂಡ ಹೆಚ್ಚಿನ ಸಮತೋಲನದಿಂದ ಕೂಡಿರಲಿದೆ ಎನ್ನುವುದು ತಂಡದ ಆಡಳಿತದ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ರೋಹಿತ್‌ ಜತೆ ಪೃಥ್ವಿ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಪಡೆಯಲಿದ್ದಾರೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ದಿಢೀರನೆ ಸ್ಪರ್ಧೆಗಿಳಿದ ಪೃಥ್ವಿ!: ಡೋಪಿಂಗ್‌ನಿಂದಾಗಿ 8 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದ ಪೃಥ್ವಿ, ನಿಷೇಧ ಅವಧಿ ಮುಕ್ತಾಯಗೊಂಡ ಬಳಿಕ ದೇಸಿ ಕ್ರಿಕೆಟ್‌ಗೆ ಮರಳಿದರು. ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ವೇಳೆ ಗಾಯಗೊಂಡು ಹಲವು ದಿನಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಪೃಥ್ವಿ, ಭಾರತ ‘ಎ’ ತಂಡದಲ್ಲಿ ಆಡುವ ಅವಕಾಶ ಪಡೆದರು. ಸಿಕ್ಕ ಅವಕಾಶದಲ್ಲಿ ದೊಡ್ಡ ಮೊತ್ತ ದಾಖಲಿಸಿ ಆಯ್ಕೆಗಾರರ ಗಮನ ಸೆಳೆದು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪೃಥ್ವಿ ತಮಗಿಂತ ಮೊದಲೇ ಏಕದಿನ ತಂಡದ ಆರಂಭಿಕನ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ಮಯಾಂಕ್‌ ಅಗರ್‌ವಾಲ್‌, ಶುಭ್‌ಮನ್‌ ಗಿಲ್‌ರನ್ನು ಹಿಂದಿಕ್ಕಿದ್ದಾರೆ. ಮಯಾಂಕ್‌ ಕಳೆದ ವರ್ಷ ವಿಶ್ವಕಪ್‌ನ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಗಿಲ್‌ ಕಳೆದ ವರ್ಷ ನ್ಯೂಜಿಲೆಂಡ್‌ ಪ್ರವಾಸದಲ್ಲಿ 2 ಏಕದಿನ ಪಂದ್ಯಗಳನ್ನಾಡಿದರು. ಆದರೆ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಒಮ್ಮೆ ತಂಡದಿಂದ ಹೊರಬಿದ್ದವರು ಮತ್ತೆ ವಾಪಸಾಗಿಲ್ಲ.

ಧವನ್‌ ಹಾದಿ ಮತ್ತಷ್ಟುಕಠಿಣ?: ಶಿಖರ್‌ ಧವನ್‌ ಪದೇ ಪದೇ ಗಾಯಗೊಳ್ಳುತ್ತಿದ್ದು, ತಂಡಕ್ಕೆ ವಾಪಸಾಗಲು ಹೆಚ್ಚಿನ ಪರಿಶ್ರಮ ವಹಿಸಬೇಕಿದೆ. ಒಂದೊಮ್ಮೆ ಪೃಥ್ವಿ ಶಾ ಪಾದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ತೋರಿದರೆ ಧವನ್‌ಗೆ ತಂಡದ ಬಾಗಿಲು ಮುಚ್ಚಿದಂತಾಗುತ್ತದೆ. 2023ರ ಏಕದಿನ ವಿಶ್ವಕಪ್‌ಗೆ ತಂಡ ಸಿದ್ಧಪಡಿಸಲು ಬಿಸಿಸಿಐ ಯೋಜನೆಗಳನ್ನು ಹಾಕಿಕೊಂಡಿದ್ದು, 20 ವರ್ಷದ ಪೃಥ್ವಿ ಶಾ ಖಂಡಿತವಾಗಿಯೂ ಆಯ್ಕೆ ಸಮಿತಿಯ ನೆಚ್ಚಿನ ಆಟಗಾರನೆನಿಸಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಆಯ್ಕೆ ಸಮಿತಿಗೆ ಮೆಚ್ಚುಗೆಯಾದರೆ, ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಅವರನ್ನು ಆಯ್ಕೆ ಮಾಡಬಹುದು.

ಭಾರತ ‘ಎ’ಗೆ 5 ವಿಕೆಟ್‌ ಜಯ

ಲಿಂಕನ್‌: ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ‘ಎ’ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ‘ಎ’ 48.3 ಓವರಲ್ಲಿ 230 ರನ್‌ಗೆ ಆಲೌಟ್‌ ಆಯಿತು. ಸುಲಭ ಗುರಿ ಬೆನ್ನತ್ತಿದ ಭಾರತ ಇನ್ನೂ 29.3 ಓವರ್‌ಗಳಲ್ಲಿ ಜಯ ಸಾಧಿಸಿತು.

ಸ್ಕೋರ್‌: ನ್ಯೂಜಿಲೆಂಡ್‌ ‘ಎ’ 230/10, ಭಾರತ ‘ಎ’ 231/5

Follow Us:
Download App:
  • android
  • ios