ಮಿಚೆಲ್ ಸ್ಟಾರ್ಕ್ ಅವರ 6 ವಿಕೆಟ್‌ಗಳಿಗೆ ಭಾರತ ತತ್ತರಿಸಿ ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು. ನಿತೀಶ್ ರೆಡ್ಡಿ 42 ರನ್ ಗಳಿಸಿ ಹೋರಾಟ ನಡೆಸಿದರು.
ಅಡಿಲೇಡ್: ನಿತೀಶ್ ರೆಡ್ಡಿ ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ, ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 180 ರನ್‌ಗಳಿಗೆ ಸರ್ವಪತನ ಕಂಡಿದೆ. ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಗೆ ಬಲವಾದ ಪೆಟ್ಟು ನೀಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್ ಗಿಲ್ 69 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಟಾರ್ಕ್ ಮತ್ತೊಮ್ಮೆ ಯಶಸ್ವಿಯಾದರು. ರಾಹುಲ್ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ 7 ರನ್ ಗಳಿಸಿ ಸ್ಟಾರ್ಕ್‌ಗೆ ಮೂರನೇ ಬಲಿಯಾದರು. ಇನ್ನು ಶುಭ್‌ಮನ್ ಗಿಲ್ 31 ರನ್ ಗಳಿಸಿ ಸ್ಕಾಟ್ ಬೋಲೆಂಡ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಕೇವಲ 3 ರನ್ ಗಳಿಸಿ ಬೋಲೆಂಡ್‌ಗೆ ಎರಡನೇ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 21 ರನ್ ಬಾರಿಸಿದರೆ, ರವಿಚಂದ್ರನ್ ಅಶ್ವಿನ್ ಚುರುಕಿನ 22 ರನ್ ಗಳಿಸಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.
ನಿತೀಶ್ ರೆಡ್ಡಿ ದಿಟ್ಟ ಬ್ಯಾಟಿಂಗ್: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ಮಾಡಿದ ನಿತೀಶ್ ರೆಡ್ಡಿ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ನಿತೀಶ್ ರೆಡ್ಡಿ 54 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 42 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಸ್ಟಾರ್ಕ್‌ಗೆ 5 ವಿಕೆಟ್ ಗೊಂಚಲು: ಎರಡನೇ ಟೆಸ್ಟ್‌ನ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ತೋರಿದ ಮಿಚೆಲ್ ಸ್ಟಾರ್ಕ್ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 5+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಡೇಂಜರಸ್ ವೇಗಿಯಾಗಿರುವ ಸ್ಟಾರ್ಕ್, 4ನೇ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 5+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಸ್ಟಾರ್ಕ್ 48 ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಾರ್ಕ್ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ.
