ಟೀಂ ಇಂಡಿಯಾ ಎದುರು ಬಾಂಗ್ಲಾದೇಶ ತಂಡವು ಕಾನ್ಪುರ ಟೆಸ್ಟ್‌ನಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕಾನ್ಪುರ: ಮಳೆಯಿಂದಾಗಿ ಎರಡು ದಿನದಾಟ ರದ್ದಾಗಿದ್ದರೂ, ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಮತ್ತೊಮ್ಮೆ ಮಾರಕ ದಾಳಿ ಸಂಘಟಿಸುವ ಮೂಲಕ ಬಾಂಗ್ಲಾದೇಶವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಮೊಮಿನುಲ್ ಹಕ್ ಅಜೇಯ ಶತಕದ ಹೊರತಾಗಿಯೂ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ದಿ ಗ್ರೀನ್ ಪಾರ್ಕ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಮೊದಲ ದಿನ ಮಳೆ ಹಾಗೂ ಮಂದ ಬೆಳಕಿನ ಕಾರಣ ಕೇವಲ 35 ಓವರ್‌ಗಳ ಪಂದ್ಯಾಟ ಮಾತ್ರ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತ್ತು.
ಇನ್ನು ಇದಾದ ಬಳಿಕ ಎರಡು ಹಾಗೂ ಮೂರನೇ ದಿನದಾಟವು ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೇ ರದ್ದಾಗಿತ್ತು. ಇದೀಗ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಬಾಂಗ್ಲಾ ತಂಡವನ್ನು ಕೇವಲ 233 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮೊಮಿನುಲ್ ಹಕ್ 194 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 107 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಮೊಮಿನುಲ್ ಹಕ್ ಹೊರತುಪಡಿಸಿ ಬಾಂಗ್ಲಾದೇಶದ ಯಾವೊಬ್ಬ ಬ್ಯಾಟರ್ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.
ಭಾರತ-ಬಾಂಗ್ಲಾದೇಶ ನಡುವಿನ ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುತ್ತಾ?
ಟೀಂ ಇಂಡಿಯಾ ಪರ ಶಿಸ್ತುಬದ್ದ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ಇನ್ನು ರವೀಂದ್ರ ಜಡೇಜಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಟೆಸ್ಟ್‌ನಲ್ಲಿ 300 ವಿಕೆಟ್ ಕಬಳಿಸಿದ ಜಡೇಜಾ: ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ, ಬಾಂಗ್ಲಾದೇಶದ 10ನೇ ವಿಕೆಟ್ ಖಾಲಿದ್ ಅಹಮದ್ ಅವರನ್ನು ಬಲಿ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
