ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿದೆ. ಕಾನ್‌ಸ್ಟಾಸ್‌ ಮತ್ತು ಬುಮ್ರಾ ನಡುವಿನ ಮಾತಿನ ಚಕಮಕಿಯ ಪರಿಣಾಮ ಖವಾಜ ವಿಕೆಟ್‌ ಕಳೆದುಕೊಂಡರು. ಭಾರತ 185 ರನ್‌ಗಳಿಗೆ ಆಲೌಟ್‌ ಆಗಿ, ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 9 ರನ್‌ ಗಳಿಸಿದೆ.

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯ ಮತ್ತೊಮ್ಮೆ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್‌ ಹಾಗೂ ಟೀಂ ಇಂಡಿಯಾ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ನಡುವಿನ ಮಾತಿನ ಚಕಮಕಿಗೆ ಮತ್ತೋರ್ವ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಬೆಲೆ ತೆತ್ತಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 5ನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೇವಲ 185 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ದಿನದಾಟದ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿದ್ದಾಗ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮಾಡಲಿಳಿಯಿತು. 

ಸಿಡ್ನಿ ಟೆಸ್ಟ್: ಭಾರತ 185ಕ್ಕೆ ಆಲೌಟ್, ಆಸೀಸ್‌ಗೆ ಆರಂಭಿಕ ಆಘಾತ

ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಎಸೆತವನ್ನೇ ಸ್ಯಾಮ್ ಕಾನ್‌ಸ್ಟಾಸ್‌ ಬೌಂಡರಿ ಬಾರಿಸುವ ಮೂಲಕ ಆಕ್ರಮಣಕಾರಿ ಆಟವಾಡುವ ಮುನ್ಸೂಚನೆ ನೀಡಿದರು. ಇನ್ನು ದಿನದಾಟದ ಕೊನೆಯ ಓವರ್‌ನ ಕೊನೆಯ ಎಸೆತ ಎಸೆಯುವ ವೇಳೆ ಸ್ಯಾಮ್ ಕಾನ್‌ಸ್ಟಾಸ್‌ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. 

ಸ್ಯಾಮ್ ಕಾನ್‌ಸ್ಟಾಸ್‌, ಬುಮ್ರಾ ಅವರನ್ನು ಉದ್ದೇಶಿಸಿ, ಏನಾಯ್ತು, ಯಾಕೆ ವಿಕೆಟ್ ಬೀಳ್ತಿಲ್ಲವಾ? ಎಂದು ಟೀಂ ಇಂಡಿಯಾ ವೇಗಿಯನ್ನು ಕೆಣಕಿದ್ದಾರೆ. ಆಗ ಸುಮ್ಮನಾಗದ ಜಸ್ಪ್ರೀತ್ ಬುಮ್ರಾ, 'ಒಂಚೂರು ಕಾದು ನೋಡು' ಎಂದು ತಿರುಗೇಟು ನೀಡುತ್ತಾರೆ. ಮರು ಎಸೆತದಲ್ಲೇ ಜಸ್ಪ್ರೀತ್ ಬುಮ್ರಾ ಸ್ಟ್ರೈಕ್‌ನಲ್ಲಿದ್ದ ಉಸ್ಮಾನ್ ಖವಾಜ ಅವರನ್ನು ಬಲಿಪಡೆದು ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿದ್ದಾರೆ.

Scroll to load tweet…

ಭಾರತ ತಂಡದಲ್ಲಿ ಯಾವುದೇ ಬಿರುಕಿಲ್ಲ, ಚೆನ್ನಾಗಿದ್ದೇವೆ: ಗೌತಮ್ ಗಂಭೀರ್

ಉಸ್ಮಾನ್ ಖವಾಜ ವಿಕೆಟ್ ಕಬಳಿಸುತ್ತಿದ್ದಂತೆಯೇ ಬುಮ್ರಾ, ಸ್ಯಾಮ್ ಕಾನ್‌ಸ್ಟಾಸ್‌ ಅವರ ಮುಂದೆಯೇ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಸದ್ಯ ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದ್ದು, ಇನ್ನೂ 176 ರನ್‌ಗಳ ಹಿನ್ನಡೆಯಲ್ಲಿದೆ.