ಸೋಮವಾರ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಕೊಹ್ಲಿ, ಪಂದ್ಯದ ಬಳಿಕ ಮಾತನಾಡಿ ತಮ್ಮ ಟಿ20 ಆಟ ಇನ್ನೂ ಮುಗಿದಿಲ್ಲ ಎಂದರು. ‘ಜಾಗತಿಕ ಮಟ್ಟದಲ್ಲಿ ಟಿ20 ಕ್ರಿಕೆಟ್‌ನ ಪ್ರಚಾರಕ್ಕೆ ಮಾತ್ರ ನನ್ನ ಹೆಸರನ್ನು ಬಳಸಲಾಗುತ್ತಿದೆ. ಆದರೆ ಈ ಮಾದರಿಯಲ್ಲಿ ಆಡುವ ಸಾಮರ್ಥ್ಯ ಇನ್ನೂ ಇದೆ’ ಎಂದರು.

ಬೆಂಗಳೂರು(ಮಾ.27): ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ತಮಗೆ ಅವಕಾಶ ಸಿಗುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ತಮ್ಮ ಆಟ ಹಾಗೂ ಮಾತಿನ ಮೂಲಕ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಸೋಮವಾರ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಕೊಹ್ಲಿ, ಪಂದ್ಯದ ಬಳಿಕ ಮಾತನಾಡಿ ತಮ್ಮ ಟಿ20 ಆಟ ಇನ್ನೂ ಮುಗಿದಿಲ್ಲ ಎಂದರು. ‘ಜಾಗತಿಕ ಮಟ್ಟದಲ್ಲಿ ಟಿ20 ಕ್ರಿಕೆಟ್‌ನ ಪ್ರಚಾರಕ್ಕೆ ಮಾತ್ರ ನನ್ನ ಹೆಸರನ್ನು ಬಳಸಲಾಗುತ್ತಿದೆ. ಆದರೆ ಈ ಮಾದರಿಯಲ್ಲಿ ಆಡುವ ಸಾಮರ್ಥ್ಯ ಇನ್ನೂ ಇದೆ’ ಎಂದರು.

ಇದೇ ವೇಳೆ ಇಂಗ್ಲೆಂಡ್‌ ವಿರುದ್ಧ ಸರಣಿ ವೇಳೆ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದ ಬಗ್ಗೆ ಮಾತನಾಡಿದ ಅವರು, ‘2 ತಿಂಗಳ ದೇಶದಲ್ಲಿರಲಿಲ್ಲ. ಯಾರೂ ಕೂಡಾ ಗುರುತಿಸಲಾಗದ ಜಾಗದಲ್ಲಿದ್ದೆವು. ಕುಟುಂಬದೊಂದಿಗೆ ಕಳೆದ ಕ್ಷಣಗಳು ಅತ್ಯಮೂಲ್ಯ. ಇಬ್ಬರು ಮಕ್ಕಳ ತಂದೆಯಾಗಿ, ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವುದು ವಿಭಿನ್ನ ಅನುಭವ’ ಎಂದು ಕೊಹ್ಲಿ ತಿಳಿಸಿದ್ದಾರೆ.

Scroll to load tweet…

ಸೋಮವಾರ ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ವಿರಾಟ್‌ 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 77 ರನ್‌ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ಬಾರಿ 50+ ಸ್ಕೋರ್‌ ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಅವರ ಅಮೋಘ ಪ್ರದರ್ಶನಕ್ಕೆ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

ಬ್ಯಾಟಿಂಗ್‌ ಬಳಿಕ ಕ್ಯಾಚ್‌ನಲ್ಲೂ ಹೊಸ ದಾಖಲೆ ನಿರ್ಮಿಸಿದ ಕೊಹ್ಲಿ!

ಬೆಂಗಳೂರು: ಪ್ರತಿ ಬಾರಿಯೂ ಒಂದಿಲ್ಲೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ದಿಗ್ಗಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಈ ಕ್ಯಾಚ್‌ನಲ್ಲೂ ನೂತನ ದಾಖಲೆ ಬರೆದಿದ್ದಾರೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಜಾನಿ ಬೇರ್‌ಸ್ಟೋವ್‌ ನೀಡಿದ ಕ್ಯಾಚ್‌ ಪಡೆದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

ಪಂದ್ಯದಲ್ಲಿ ಒಟ್ಟು 2 ಕ್ಯಾಚ್‌ ಪಡೆದ ಕೊಹ್ಲಿ ಸದ್ಯ ಟಿ20 ಕ್ರಿಕೆಟ್‌ನ ಕ್ಯಾಚ್‌ ಸಂಖ್ಯೆಯನ್ನು 174ಕ್ಕೆ ಹೆಚ್ಚಿಸಿದರು. ಅವರು ಸುರೇಶ್‌ ರೈನಾರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ರೈನಾ 172 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು ರೋಹಿತ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 167, ಮನೀಶ್‌ ಪಾಂಡೆ 146, ಸೂರ್ಯಕುಮಾರ್‌ ಯಾದವ್‌ 136 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಐಪಿಎಲ್‌ನಲ್ಲಿ 2ನೇ ಸ್ಥಾನಿ: ಇನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದವರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರು 239 ಪಂದ್ಯಗಳಲ್ಲಿ 108 ಕ್ಯಾಚ್‌ ಪಡೆದಿದ್ದು, 205 ಪಂದ್ಯಗಳಲ್ಲಿ 109 ಕ್ಯಾಚ್‌ ಹಿಡಿದಿರುವ ಸುರೇಶ್‌ ರೈನಾ ಅಗ್ರಸ್ಥಾನದಲ್ಲಿದ್ದಾರೆ.

ಕೀರನ್‌ ಪೊಲ್ಲಾರ್ಡ್‌ 189 ಪಂದ್ಯಗಳಲ್ಲಿ 103, ರೋಹಿತ್‌ ಶರ್ಮಾ 244 ಪಂದ್ಯಗಳಲ್ಲಿ 99, ರವೀಂದ್ರ ಜಡೇಜಾ 227 ಪಂದ್ಯಗಳಲ್ಲಿ 97 ಕ್ಯಾಚ್‌ಗಳನ್ನು ಪಡೆದು ನಂತರದ ಸ್ಥಾನಗಳಲ್ಲಿದ್ದಾರೆ.