ಲಲಿತ್ ಯಾದವ್ ಎಸೆದ ನಾಲ್ಕನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ 2 ಹಾಗೂ ಟ್ರಾವಿಸ್ ಹೆಡ್ ಒಂದು ಸಿಕ್ಸರ್ ಸೇರಿ 21 ರನ್ ಸಿಡಿಸಿದರೆ, 5ನೇ ಓವರ್ ಎಸೆದ ಕುಲ್ದೀಪ್ ಯಾದವ್‌ಗೆ ಅಭಿಷೇಕ್ ಶರ್ಮಾ 3 ಸಿಕ್ಸರ್ ಸಹಿತ 20 ರನ್ ಸಿಡಿಸಿದರು. ಮೊದಲ 5 ಓವರ್ ಅಂತ್ಯದ ವೇಳೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ವಿಕೆಟ್ ನಷ್ಟವಿಲ್ಲದೇ 103 ರನ್ ಕಲೆಹಾಕಿತು.
ನವದೆಹಲಿ(ಏ.20): ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಬ್ಯಾಟರ್‌ಗಳ ಆರ್ಭಟ ಅರುಣ್ ಜೇಟ್ಲಿ ಮೈದಾನದಲ್ಲೂ ಮುಂದುವರೆದಿದೆ. ಟ್ರಾವಿಸ್ ಹೆಡ್, ಶಹಬಾಜ್ ಅಹಮದ್ ಆಕರ್ಷಕ ಅರ್ಧಶತಕ ಹಾಗೂ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು 7 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿದೆ. ಈ ಮೂಲಕ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಠಿಣ ಗುರಿ ನೀಡಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಡ್ರೀಮ್ ಆರಂಭ ಒದಗಿಸಿಕೊಡುವಲ್ಲಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಯಶಸ್ವಿಯಾದರು. ಖಲೀಲ್ ಅಹಮದ್ ಎಸೆದ ಮೊದಲ ಓವರ್‌ನಲ್ಲಿ ಹೆಡ್ 19 ರನ್ ಚಚ್ಚಿದರು. ಇನ್ನು ಲಲಿತ್ ಯಾದವ್ ಅವರ ಎರಡನೇ ಓವರ್‌ನಲ್ಲಿ ಸನ್‌ರೈಸರ್ಸ್ ತಂಡವು 21 ರನ್ ಕಲೆಹಾಕಿತು. ಇನ್ನು ಏನ್ರಿಚ್ ನೋಕಿಯ ಎಸೆದ ಮೂರನೇ ಓವರ್‌ನಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್ ಗಳಿಸಿತು. ಕೇವಲ ಮೂರು ಓವರ್‌ನೊಳಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 62 ರನ್ ಚಚ್ಚಿತು. ಟ್ರಾವಿಸ್ ಹೆಡ್ ಕೇವಲ 16 ಎಸೆತಗಳನ್ನು ಎದುರಿಸಿ ಅರ್ಧಶತಕಗಳನ್ನು ಪೂರೈಸಿದರು. ಈ ಮೂಲಕ ಈ ಆವೃತ್ತಿಯ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ಜತೆ ಜಂಟಿ ಅತಿವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಇದರ ಜತೆಗೆ ಮೂರನೇ ಬಾರಿಗೆ ಐಪಿಎಲ್ ಪವರ್‌ಪ್ಲೇನೊಳಗೆ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.
ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಅಪರೂಪದ ದಾಖಲೆ ಮುರಿದ ಎಂ ಎಸ್ ಧೋನಿ..!
ಇನ್ನು ಲಲಿತ್ ಯಾದವ್ ಎಸೆದ ನಾಲ್ಕನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ 2 ಹಾಗೂ ಟ್ರಾವಿಸ್ ಹೆಡ್ ಒಂದು ಸಿಕ್ಸರ್ ಸೇರಿ 21 ರನ್ ಸಿಡಿಸಿದರೆ, 5ನೇ ಓವರ್ ಎಸೆದ ಕುಲ್ದೀಪ್ ಯಾದವ್‌ಗೆ ಅಭಿಷೇಕ್ ಶರ್ಮಾ 3 ಸಿಕ್ಸರ್ ಸಹಿತ 20 ರನ್ ಸಿಡಿಸಿದರು. ಮೊದಲ 5 ಓವರ್ ಅಂತ್ಯದ ವೇಳೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ವಿಕೆಟ್ ನಷ್ಟವಿಲ್ಲದೇ 103 ರನ್ ಕಲೆಹಾಕಿತು. ಇನ್ನು ಪವರ್‌ಪ್ಲೇನ ಕೊನೆಯ ಓವರ್ ಎಸೆದ ಮುಕೇಶ್ ಕುಮಾರ್ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಚಚ್ಚಿಸಿಕೊಂಡರು. ಪರಿಣಾಮ ಪವರ್‌ಪ್ಲೇ ನಲ್ಲಿ ಹೆಡ್-ಅಭಿಷೇಕ್ ಜೋಡಿ 125 ರನ್‌ಗಳ ದಾಖಲೆಯ ಜತೆಯಾಟವಾಡಿತು. ಈ ಮೊದಲು 2017ರಲ್ಲಿ ಪವರ್‌ಪ್ಲೇನಲ್ಲಿ ಆರ್‌ಸಿಬಿ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು 105 ರನ್ ಬಾರಿಸಿತ್ತು. ಆ ದಾಖಲೆ ಇದೀಗ ನುಚ್ಚುನೂರಾಯಿತು.
ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 46 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು 7ನೇ ಓವರ್‌ನ ಕೊನೆಯ ಎಸೆತದಲ್ಲಿ ಕುಲ್ದೀಪ್ ಮತ್ತೋರ್ವ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪತನವಾದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ಇನ್ನು 9ನೇ ಓವರ್‌ನಲ್ಲಿ ಕುಲ್ದೀಪ್ ಯಾದವ್ 16 ರನ್ ಚಚ್ಚಿಸಿಕೊಂಡರೂ, ಟ್ರಾವಿಸ್ ಹೆಡ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಟ್ರಾವಿಸ್ ಹೆಡ್ ಕೇವಲ 32 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 6 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 89 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅನಾಯಾಸವಾಗಿ 300 ರನ್ ಗುರಿ ದಾಟಬಹುದು ಎಂದು ಊಹಿಸಲಾಗಿತ್ತು. ಆದರೆ ಸತತ ವಿಕೆಟ್ ಪತನದಿಂದ ರನ್ ವೇಗ ಕೊಂಚ ಮಂಕಾಯಿತು. ಕೊನೆಯಲ್ಲಿ ನಿತೀಶ್ ರೆಡ್ಡಿ 37 ರನ್ ಸಿಡಿಸಿದರೆ, ಶಹಬಾಜ್ ಅಹಮದ್ ಕೇವಲ 29 ಎಸೆತಗಳನ್ನು ಎದುರಿಸಿ ಅಜೇಯ 59 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು.
