ಗೆಲ್ಲಲು ಅಸಾಧ್ಯ 288 ರನ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಸಿಡಿಲಬ್ಬರದ ಆರಂಭವನ್ನು ಒದಗಿಸಿಕೊಟ್ಟರು. ಕೇವಲ 3.5 ಓವರ್‌ಗಳಲ್ಲಿ 52 ರನ್ ಕಲೆಹಾಕಿತು. ಸನ್‌ರೈಸರ್ಸ್ ಹೈದರಾಬಾದ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ಪವರ್ ಪ್ಲೇನಲ್ಲಿ 79 ರನ್ ಬಾರಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಪವರ್‌ನಲ್ಲಿ ಆರ್‌ಸಿಬಿ ಬಾರಿಸಿದ ಗರಿಷ್ಠ ಮೊತ್ತ ಎನಿಸಿತು.

ಬೆಂಗಳೂರು(ಏ.15) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಇಂದು ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆಗೆ ಸಾಕ್ಷಿಯಾಯಿತು. ಗೆಲ್ಲಲು 288 ರನ್ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ 262 ರನ್ ಗಳಿಸಲಷ್ಟೇ ಶಕ್ತವಾಯಿತು. ವಿರಾಟ್, ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಆರ್‌ಸಿಬಿ 25 ರನ್ ಅಂತರದ ಸೋಲು ಅನುಭವಿಸಿತು. ಇದು ಟೂರ್ನಿಯಲ್ಲಿ ಆರ್‌ಸಿಬಿ ಅನುಭವಿಸಿದ ಸತತ 5ನೇ ಹಾಗೂ ಒಟ್ಟಾರೆ 6ನೇ ಸೋಲು ಎನಿಸಿತು.

ಗೆಲ್ಲಲು ಅಸಾಧ್ಯ 288 ರನ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಸಿಡಿಲಬ್ಬರದ ಆರಂಭವನ್ನು ಒದಗಿಸಿಕೊಟ್ಟರು. ಕೇವಲ 3.5 ಓವರ್‌ಗಳಲ್ಲಿ 52 ರನ್ ಕಲೆಹಾಕಿತು. ಸನ್‌ರೈಸರ್ಸ್ ಹೈದರಾಬಾದ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ಪವರ್ ಪ್ಲೇನಲ್ಲಿ 79 ರನ್ ಬಾರಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಪವರ್‌ನಲ್ಲಿ ಆರ್‌ಸಿಬಿ ಬಾರಿಸಿದ ಗರಿಷ್ಠ ಮೊತ್ತ ಎನಿಸಿತು.

ಇನ್ನು ಪವರ್‌ಪ್ಲೇ ಬೆನ್ನಲ್ಲೇ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಮಯಾಂಕ್ ಮಾರ್ಕಂಡೆ ತಾವೆಸೆದ ಎರಡನೇ ಎಸೆತದಲ್ಲೇ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ವಿರಾಟ್ ಕೇವಲ 20 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 42 ರನ್ ಸಿಡಿಸಿದರು.

ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ: ಉತ್ತಮ ಆರಂಭ ಪಡೆದ ಆರ್‌ಸಿಬಿ ತಂಡವು, ಅದೇ ಲಯ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ವಿಲ್ ಜ್ಯಾಕ್ಸ್ 7 ರನ್ ಗಳಿಸಿ ರನೌಟ್ ಆದರೆ, ರಜತ್ ಪಾಟೀದಾರ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸೌರವ್ ಚೌವ್ಹಾಣ್ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದರು.

Scroll to load tweet…

ಚಿನ್ನಸ್ವಾಮಿಯಲ್ಲಿ ಫಾಫ್-ಡಿಕೆ ಶೋ: ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ನಾಯಕ ಫಾಫ್ ಡು ಪ್ಲೆಸಿಸ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದರು. ಆರೆಂಜ್ ಆರ್ಮಿಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಫಾಫ್ ಕೇವಲ 28 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 62 ರನ್ ಬಾರಿಸಿ ಸನ್‌ರೈಸರ್ಸ್‌ ನಾಯಕ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಇಷ್ಟು ದಿನ ಕೊನೆಯ ಕೆಲ ಓವರ್‌ಗಳಲ್ಲಿ ಕ್ರೀಸ್‌ಗಿಳಿದು ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಿದ್ದ ದಿನೇಶ್ ಕಾರ್ತಿಕ್, ಇಂದು 10ನೇ ಓವರ್‌ನಲ್ಲಿ ಕ್ರೀಸ್‌ಗಿಳಿದರು. ಆರಂಭದ ಕೆಲ ಎಸೆತಗಳನ್ನು ಎಚ್ಚರಿಕೆಯಿಂದ ಆಡಿದ ಡಿಕೆ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಡಿಕೆ ಚೆಂಡನ್ನು ಚಿನ್ನಸ್ವಾಮಿ ಸ್ಟೇಡಿಯಂನ ಮೂಲೆಮೂಲೆಗಟ್ಟಿ ಆರ್‌ಸಿಬಿ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದರು. ಡಿಕೆ ಕೇವಲ 35 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ವಿಸ್ಪೋಟಕ 83 ರನ್ ಸಿಡಿಸಿ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಡಿಕೆ ಔಟ್ ಆಗುತ್ತಿದ್ದಂತೆಯೇ ಆರ್‌ಸಿಬಿ ಗೆಲುವಿನ ಕನಸು ನುಚ್ಚುನೂರಾಯಿತು.

Scroll to load tweet…

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಕೇವಲ 8.1 ಓವರ್‌ನಲ್ಲಿ 108 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಅಭಿಷೇಕ್ ಶರ್ಮಾ 34 ರನ್ ಸಿಡಿಸಿದರೆ, ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 102 ರನ್ ಸಿಡಿಸಿದರು. ಇನ್ನು ಹೆನ್ರಿಚ್ ಕ್ಲಾಸೇನ್ 67, ಏಯ್ಡನ್ ಮಾರ್ಕ್‌ರಮ್ ಅಜೇಯ 32 ಹಾಗೂ ಅಬ್ದುಲ್ ಸಮದ್ ಅಜೇಯ 37 ರನ್ ಸಿಡಿಸಿದರು. ಅಂತಿಮವಾಗಿ ಸನ್‌ರೈಸರ್ಸ್‌ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು.