ಸದ್ಯ ಭಾರತ ತಂಡದಲ್ಲಿರುವ ಹಲವು ಆಟಗಾರರು ಕಳೆದ ವರ್ಷ ವೆಸ್ಟ್‌ಇಂಡೀಸ್‌ ವಿರುದ್ಧ ಫ್ಲೋರಿಡಾ, ಗಯಾನಾದಲ್ಲಿ ಸರಣಿ ಆಡಿದ್ದರು. ಆದರೆ ಕೆಲ ಆಟಗಾರರು ಇದೇ ಮೊದಲ ಬಾರಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ಆಡಲು ಸಜ್ಜಾಗಿದ್ದು, ಕಠಿಣ ಸವಾಲು ಎದುರಾಗಲಿದೆ.

ನ್ಯೂಯಾರ್ಕ್‌: ಕಳೆದೆರಡು ತಿಂಗಳುಗಳಿಂದ ಐಪಿಎಲ್‌ನಲ್ಲಿ ತಲ್ಲೀನರಾಗಿದ್ದ ಭಾರತೀಯ ಆಟಗಾರರು ಕೆಲ ದಿನಗಳ ಬಿಡುವಿನ ಬಳಿಕ ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿ ಆರಂಭಿಸಿದ್ದಾರೆ. ದಿನಗಳ ಹಿಂದಷ್ಟೇ ಅಮೆರಿಕದ ವಿಮಾನವೇರಿದ್ದ ಟೀಂ ಇಂಡಿಯಾ ಆಟಗಾರರು ಬುಧವಾರ ಬೆಳಗ್ಗೆ ನ್ಯೂಯಾರ್ಕ್‌ನ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಕೆಲ ಗಂಟೆಗಳ ಕಾಲ ಅಭ್ಯಾಸ ನಡೆಸಿದರು.

ನಾಯಕ ರೋಹಿತ್‌ ಶರ್ಮಾ, ಉಪನಾಯಕ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ರಿಷಭ್‌ ಪಂತ್‌, ಮೊಹಮದ್ ಸಿರಾಜ್‌, ಸೂರ್ಯಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌, ಸಂಜು ಸ್ಯಾಮ್ಸನ್‌, ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಕೆಲ ಕಾಲ ಜಾಗಿಂಗ್‌ ನಡೆಸಿ, ಫುಟ್ಬಾಲ್‌ ಆಡಿದರು. ಸಹಾಯಕ ಸಿಬ್ಬಂದಿ ಕೂಡಾ ಆಟಗಾರರ ಜೊತೆ ಕಾಣಿಸಿಕೊಂಡರು.

Scroll to load tweet…

ಬಿಸಿಲಿನ ಸವಾಲು: ಭಾರತೀಯ ಆಟಗಾರರು ಕಳೆದೆರಡು ತಿಂಗಳಲ್ಲಿ ಐಪಿಎಲ್‌ನ ಬಹುತೇಕ ಪಂದ್ಯಗಳನ್ನು ರಾತ್ರಿ ವೇಳೆ ಆಡಿದ್ದಾರೆ. ಆದರೆ ಟಿ20 ವಿಶ್ವಕಪ್‌ನ ಗುಂಪು ಹಂತದ ಭಾರತದ ಪಂದ್ಯಗಳು ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಹಗಲಿನಲ್ಲಿ ನಡೆಯುತ್ತವೆ. ಹೀಗಾಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಭಾರತದ ಆಟಗಾರರು ಬುಧವಾರ ಹಗಲಿನಲ್ಲೇ ಅಭ್ಯಾಸ ಶುರು ಮಾಡಿದರು.

ಇಲ್ಲಿ ಸಾಮಾನ್ಯವಾಗಿ 25ರಿಂದ 27 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಹೀಗಾಗಿ ವಿಶ್ವಕಪ್‌ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಅಗತ್ಯವಿದೆ. ಸಾಮಾನ್ಯವಾಗಿ ಸಂಜೆ ಬಳಿಕ ಅಭ್ಯಾಸ ನಡೆಸುವ ಭಾರತೀಯ ಆಟಗಾರರು ಸ್ಥಳೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಬಿಸಿಲಲ್ಲೇ ತಯಾರಿ ಆರಂಭಿಸಿದರು. ಆದರೆ ಮೊದಲ ದಿನ ಕೇವಲ ಆಟೋಟದಲ್ಲಿ ತೊಡಗಿಸಿಕೊಂಡ ಆಟಗಾರರು ಗುರುವಾರದಿಂದ ನೆಟ್‌ ಅಭ್ಯಾಸ ನಡೆಸಲಿದ್ದಾರೆ.

ಸದ್ಯ ಭಾರತ ತಂಡದಲ್ಲಿರುವ ಹಲವು ಆಟಗಾರರು ಕಳೆದ ವರ್ಷ ವೆಸ್ಟ್‌ಇಂಡೀಸ್‌ ವಿರುದ್ಧ ಫ್ಲೋರಿಡಾ, ಗಯಾನಾದಲ್ಲಿ ಸರಣಿ ಆಡಿದ್ದರು. ಆದರೆ ಕೆಲ ಆಟಗಾರರು ಇದೇ ಮೊದಲ ಬಾರಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ಆಡಲು ಸಜ್ಜಾಗಿದ್ದು, ಕಠಿಣ ಸವಾಲು ಎದುರಾಗಲಿದೆ.

ಟಿ20 ರ್‍ಯಾಂಕಿಂಗ್‌: ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಭದ್ರ

ದುಬೈ: ಟಿ20 ವಿಶ್ವಕಪ್‌ಗೂ ಮುನ್ನ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ ನಂ.1 ಕಾಯ್ದುಕೊಂಡಿದೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಚಾಂಪಿಯನ್‌ ಭಾರತ 264 ಅಂಕಗಳನ್ನು ಹೊಂದಿದೆ.

ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ 4ನೇ ಸ್ಥಾನಕ್ಕೇರಿದ್ದು, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇನ್ನು, ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.