ದುಬೈ(ಫೆ.18): ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಕೆ.ಎಲ್‌.ರಾಹುಲ್‌, ಸೋಮವಾರ ನೂತನವಾಗಿ ಪ್ರಕಟಗೊಂಡ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. 

5 ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕ ಸೇರಿದಂತೆ 224 ರನ್‌ ಗಳಿಸಿದ ರಾಹುಲ್‌, ಸರಣಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. 823 ರೇಟಿಂಗ್‌ ಅಂಕ ಹೊಂದಿರುವ ರಾಹುಲ್‌, ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್‌ ಆಜಂ (879 ರೇಟಿಂಗ್‌ ಅಂಕ)ಗಿಂತ ಬಹಳ ಹಿಂದಿದ್ದಾರೆ.

ICC ಟೆಸ್ಟ್‌ ರ‍್ಯಾಂಕಿಂಗ್: ನಂ.1 ಸ್ಥಾನ ಉಳಿಸಿಕೊಂಡ ಕೊಹ್ಲಿ

ಕೊಹ್ಲಿಗೆ ಹಿನ್ನಡೆ: ಕಿವೀಸ್‌ ವಿರುದ್ಧ ಸರಣಿಯಲ್ಲಿ 4 ಪಂದ್ಯಗಳನ್ನಾಡಿದ ವಿರಾಟ್‌ ಕೊಹ್ಲಿ ಕೇವಲ 105 ರನ್‌ ದಾಖಲಿಸಿದ್ದರು. ನೂತನವಾಗಿ ಪ್ರಕಟಗೊಂಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್‌ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನ ಪಡೆದಿದ್ದಾರೆ. ವಿರಾಟ್‌ 673 ಅಂಕಗಳನ್ನು ಹೊಂದಿದ್ದಾರೆ. ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ 136 ರನ್‌ ಗಳಿಸಿದ ಇಂಗ್ಲೆಂಡ್‌ ನಾಯಕ ಇಯಾನ್‌ ಮೊರ್ಗನ್‌ 9ನೇ ಸ್ಥಾನಕ್ಕೇರಿದ್ದಾರೆ. ರೋಹಿತ್‌ ಶರ್ಮಾ 11ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬಾಬರ್ ಅಜಂ, ಕೆ.ಎಲ್. ರಾಹುಲ್ ಮೊದಲೆರಡು ಸ್ಥಾನದಲ್ಲಿದ್ದರೆ, ಆರೋನ್ ಫಿಂಚ್, ಕಾಲಿನ್ ಮನ್ರೋ, ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ 5 ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಭಾರತ ವಿರುದ್ಧ ಟೆಸ್ಟ್‌ಗೆ ಕಿವೀಸ್‌ ತಂಡ ಪ್ರಕಟ

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಯಾವೊಬ್ಬ ಬೌಲರ್ ಸಹ ಅಗ್ರ 10ರಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ವೇಗಿ ಜಸ್‌ಪ್ರೀತ್‌ ಬುಮ್ರಾ 12ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಆಫ್ಘಾನಿಸ್ತಾನದ ಸ್ಪಿನ್ನರ್‌ಗಳಾದ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಇದ್ದರೆ, ಆ ಬಳಿಕ ಮಿಚೆಲ್ ಸ್ಯಾಂಟ್ನರ್, ಆಡಂ ಜಂಪಾ ಹಾಗೂ ಇಮಾದ್ ವಾಸೀಂ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಮ್ಮೆ ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ವೇಗಿಗಳಿಗಿಂತ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದು, ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ 6 ಬೌಲರ್‌ಗಳು ಸ್ಪಿನ್ನರ್‌ಗಳಾಗಿದ್ದಾರೆ.

ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ಮೂರು ಸ್ಥಾನದಲ್ಲಿವೆ.