ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ನಗದು ಬಹುಮಾನ ಮೊತ್ತವನ್ನು ಐಸಿಸಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ದುಬೈ: ವೇತನ ಬಹುಮಾನ ಮೊತ್ತ ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ವರ್ಷ ಪುರುಷರ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಸಿಕ್ಕಷ್ಟೇ ಪ್ರಶಸ್ತಿ ಮೊತ್ತವನ್ನು ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೂ ನೀಡುವುದಾಗಿ ಮಂಗಳವಾರ ಘೋಷಿಸಿದೆ.

ಕಳೆದ ಆವೃತ್ತಿಗೆ ಹೋಲಿಸಿದರೆ ಪ್ರಶಸ್ತಿ ಮೊತ್ತ ಒಟ್ಟಾರೆ ಶೇ.225ರಷ್ಟು ಏರಿಕೆಯಾಗಿದ್ದು, ಒಟ್ಟು 7.95 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 66.60 ಕೋಟಿ ರು.) ಇರಲಿದೆ. ವಿಶ್ವಕಪ್ ಗೆಲ್ಲುವ ತಂಡಕ್ಕೆ 2.34 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 19.6 ಕೋಟಿ ರು.) ಪ್ರಶಸ್ತಿ ಮೊತ್ತ ಸಿಗಲಿದ್ದು, ಕಳೆದ ಆವೃತ್ತಿಗೆ ಹೋಲಿಸಿದರೆ ಇದು ಶೇ.134ರಷ್ಟು ಹೆಚ್ಚು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡಕ್ಕೆ 1 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 8.37 ಕೋಟಿ ರು.) ಬಹುಮಾನ ಮೊತ್ತ ದೊರೆತಿತ್ತು. ಈ ವರ್ಷ ಚಾಂಪಿಯನ್ ಆದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ 2.45 ಮಿಲಿಯನ್ ಡಾಲರ್ (20.52 ಕೋಟಿ ರು.) ಸಿಕ್ಕಿತ್ತು.

Scroll to load tweet…

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ರಾಬಿನ್ ಸಿಂಗ್!

'2030ರ ವೇಳೆಗೆ ಸಮಾನ ಬಹುಮಾನ ಮೊತ್ತ ನೀಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದ್ದೆವು. ಆ ಗುರಿಯನ್ನು 6 ವರ್ಷ ಮೊದಲೇ ತಲುಪಿದ್ದೇವೆ' ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ.

ರನ್ನರ್-ಅಪ್‌ ₹9.80 ಕೋಟಿ 

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ರನ್ನರ್ - ಅಪ್ ಸ್ಥಾನ ಪಡೆಯಲಿರುವ ತಂಡಕ್ಕೆ 1.17 ಮಿಲಿಯನ್ ಡಾಲರ್ (ಅಂದಾಜು ₹9.80 ಕೋಟಿ ರು.) ಸಿಗಲಿದೆ. ಕಳೆದ ಆವೃತ್ತಿಯಲ್ಲಿ ರನ್ನರ್ -ಅಪ್ ಆಗಿದ್ದ ದ.ಆಫ್ರಿಕಾಕ್ಕೆ 5 ಲಕ್ಷ ಅಮೆರಿಕನ್ ಡಾಲರ್ (4.18 ಕೋಟಿ ರು.) ಸಿಕ್ಕಿತ್ತು. ಇನ್ನು ಸೆಮಿಫೈನಲ್‌ಗ ಳಲ್ಲಿ ಸೋಲುವ 2 ತಂಡಗಳಿಗೆ ತಲಾ 6.75 ಲಕ್ಷ ಅಮೆರಿಕನ್ ಡಾಲರ್ (₹5.65 ಕೋಟಿ ರು.) ಸಿಗಲಿದೆ. ಇದೇ ವೇಳೆ ಗುಂಪು ಹಂತದಲ್ಲಿ ದಾಖಲಿಸುವ ಪ್ರತಿ ಗೆಲುವಿಗೆ ತಂಡಗಳಿಗೆ ₹26.10 ಲಕ್ಷ ರು. ಬೋನಸ್ ದೊರೆಯಲಿದೆ ಎಂದು ಐಸಿಸಿ ತಿಳಿಸಿದೆ.

View post on Instagram

ಮುಂಬರುವ ಅಕ್ಟೋಬರ್ 03ರಿಂದ ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ. ಕಳೆದ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ತಂಡ ‘ಎ’ ಗುಂಪಿನಲ್ಲಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಜೊತೆ ಸ್ಥಾನ ಪಡೆದಿದೆ. ಅ.4ರಂದು ಭಾರತಕ್ಕೆ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರಾಗಲಿದೆ. ಅ.6ರಂದು ಬದ್ಧವೈರಿ ಪಾಕಿಸ್ತಾನ, ಅ.9ರಂದು ಶ್ರೀಲಂಕಾ, ಅ.13ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಕರ್‌, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್‌, ದಯಾಳನ್‌ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್‌, ಸಜನಾ ಸಜೀವನ್‌.

ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್‌, ಸೈಮಾ ಥಾಕೋರ್‌.