ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇ ತಮ್ಮ ಕುಟುಂಬಕ್ಕೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ನವೆಂಬರ್ 15ರ ಶುಕ್ರವಾರ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಜೋಡಿಗೆ ಈಗಾಗಲೇ ಸಮೈರಾ ಎನ್ನುವ ಮುದ್ದಾದ ಮಗಳಿದ್ದಾಳೆ. ಸಮೈರಾ 2018ರಲ್ಲಿ ಜನಿಸಿದ್ದರು.
ಎರಡನೇ ಮಗುವಿಗೆ ತಂದೆಯಾಗುವ ಉದ್ದೇಶದಿಂದಲೇ ರೋಹಿತ್ ಶರ್ಮಾ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಗೆ ವಿಮಾನವೇರಿಲ್ಲ. ಮುಂಬೈನಲ್ಲಿದ್ದುಕೊಂಡೇ ರೋಹಿತ್ ಶರ್ಮಾ, ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದರು. ರಿತಿಕಾ ಗರ್ಭಿಣಿಯಾಗಿರುವ ವಿಚಾರವನ್ನು ಸಾಕಷ್ಟು ಸಮಯಗಳ ಕಾಲ ರೋಹಿತ್ ಶರ್ಮಾ ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಪಾಲ್ಗೊಳ್ಳುವುದು ಅನುಮಾನ ಎನ್ನುವಂತ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಹಿಟ್‌ಮ್ಯಾನ್ ಎರಡನೇ ಮಗುವಿಗೆ ತಂದೆಯಾಗುತ್ತಿರುವ ವಿಚಾರ ಬಹಿರಂಗವಾಗಿತ್ತು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ: ಪರ್ತ್‌ನಲ್ಲಿ ಟೀಂ ಇಂಡಿಯಾ ಕಠಿಣ ಅಭ್ಯಾಸ!
ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇ ಡಿಸೆಂಬರ್ 13, 2015ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾಗಿ ಮೂರು ವರ್ಷಗಳ ಬಳಿಕ ಈ ಜೋಡಿ ಸಮೈರಾ ಅವರನ್ನು ಸ್ವಾಗತಿಸಿದ್ದರು. ಇದೀಗ ಸಮೈರಾ ಬಂದ ಆರು ವರ್ಷಗಳ ಬಳಿಕ ರೋಹಿತ್ ಶರ್ಮಾ-ರಿತಿಕಾ ಸಜ್ದೇ ಎರಡನೇ ಮಗುವಿಗೆ ಪೋಷಕರಾಗಿದ್ದಾರೆ.
ಪರ್ತ್ ಟೆಸ್ಟ್‌ಗೆ ತಂಡ ಕೂಡಿಕೊಳ್ಳುತ್ತಾರಾ ರೋಹಿತ್ ಶರ್ಮಾ:
ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಟ್ಟಿನಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಈಗಾಗಲೇ ತವರಿನಲ್ಲಿ ಕಿವೀಸ್ ಎದುರು ವೈಟ್‌ವಾಷ್ ಮುಖಭಂಗ ಅನುಭವಿರುವ ರೋಹಿತ್ ಶರ್ಮಾ, ಇದೀಗ ಆಸೀಸ್ ಸರಣಿಯನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದೀಗ ಪರ್ತ್ ಟೆಸ್ಟ್ ಆರಂಭಕ್ಕೆ ಇನ್ನೂ ಏಳು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ, ಭಾರತ ತಂಡವನ್ನು ಕೂಡಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಕುತೂಹಲ ಜೋರಾಗಿದೆ. ಒಂದು ವೇಳೆ ರೋಹಿತ್ ಶರ್ಮಾ ಮೊದಲ ಟೆಸ್ಟ್‌ಗೆ ಅಲಭ್ಯರಾದರೇ, ಉಪನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22ರಿಂದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪರ್ತ್ ಟೆಸ್ಟ್ ಬಳಿಕ ಡಿಸೆಂಬರ್ 06ರಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಡಿಸೆಂಬರ್ 14ರಿಂದ ಗಾಬಾದಲ್ಲಿ ಮೂರನೇ ಟೆಸ್ಟ್ ಪಂದ್ಯವು ನಡೆದರೆ, ಡಿಸೆಂಬರ್ 26ರಿಂದ ಐತಿಹಾಸಿಕ ಮೆಲ್ಬೊರ್ನ್ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಜನವರಿ 03ರಿಂದ ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ತಂಡ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧೃವ್ ಜುರೆಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಪರ್ತ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಶ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ಮಾರ್ಷ್, ನೇಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.
