ಗಾಬಾ ಟೆಸ್ಟ್ ಮಳೆಯಿಂದಾಗಿ ಡ್ರಾ ಆಯಿತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ೪೪೫, ಭಾರತ ೨೬೦ ರನ್ ಗಳಿಸಿತು. ಆಸೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ೮೯ ರನ್‌ಗಳಿಗೆ ಡಿಕ್ಲೇರ್ ಮಾಡಿ, ಭಾರತಕ್ಕೆ ೨೭೫ ರನ್ ಗುರಿ ನೀಡಿತು. ಭಾರತ ೮ ರನ್ ಗಳಿಸಿದಾಗ ಮಳೆ ಬಂದು ಪಂದ್ಯ ರದ್ದಾಯಿತು.
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಮಳೆಯ ಅಡ್ಡಿಯ ನಡುವೆ ಕೊನೆಯ ದಿನದಾಟದಲ್ಲಿ ಇನ್ನೂ 50 ಓವರ್ ಬಾಕಿ ಇರುವಂತೆಯೇ ಉಭಯ ತಂಡಗಳ ನಾಯಕರ ಸಮ್ಮತಿಯಿಂದಾಗಿ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ.
ಇಲ್ಲಿನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಟ್ರ್ಯಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಕನ್ನಡಿಗ ಕೆ ಎಲ್ ರಾಹುಲ್(84) ಹಾಗೂ ರವೀಂದ್ರ ಜಡೇಜಾ(77) ಆಕರ್ಷಕ ಅರ್ಧಶತಕ ಹಾಗೂ ಕೊನೆಯಲ್ಲಿ ಆಕಾಶ್ ದೀಪ್(31) ಮತ್ತು ಜಸ್ಪ್ರೀತ್ ಬುಮ್ರಾ(10) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದ ಪಾರಾಯಿತು. ಅಂತಿಮವಾಗಿ ಟೀಂ ಇಂಡಿಯಾ 260 ರನ್ ಗಳಿಸಿ ಸರ್ವಪತನ ಕಂಡಿತು.
ಇನ್ನು ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಕೇವಲ 18 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಟೀಂ ಇಂಡಿಯಾಗೆ ಗಾಬಾ ಟೆಸ್ಟ್ ಗೆಲ್ಲಲು 275 ರನ್‌ಗಳ ಕಠಿಣ ಗುರಿ ನೀಡಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 2.1 ಓವರ್‌ನಲ್ಲಿ 8 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿತು. ಇದಾದ ಕೆಲ ಹೊತ್ತಿನಲ್ಲೇ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.
