ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಶಾಶ್ವತವಾಗಿ ಭಾರತವನ್ನು ತೊರೆಯಲು ಮುಂದಾಗಿದ್ದಾರಾ ಎನ್ನುವ ಪ್ರಶ್ನೆಯೊಂದು ಕಾಡಲಾರಂಭಿಸಿದೆ. ಇದಕ್ಕೆ ಕಾರಣವೂ ಇದೆ. ಏನದು ಎನ್ನುವುದನ್ನು ಈ ಸ್ಟೋರಿ ನೋಡಿ
ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗ, ರನ್ ಮಷೀನ್ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದು, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ಖಾಸಗಿ ಬದುಕಿನ ಕುರಿತಾದ ಅತಿದೊಡ್ಡ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಭಾರತವನ್ನು ತೊರೆದು ಕೆಲ ಕಾಲದ ಮಟ್ಟಿಗೆ ಸಂಪೂರ್ಣವಾಗಿ ನೆಲೆನಿಲ್ಲಲು ತೀರ್ಮಾನಿಸಿದ್ದಾರೆ ಎನ್ನುವಂತಹ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದ್ದಕ್ಕಿದ್ದಂತೆಯೇ ಈ ವಿಚಾರ ಚರ್ಚೆಗೆ ಬರಲು ಕಾರಣವೂ ಇದೆ. ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ ಬಳಿಕ ವಿರಾಟ್ ಕೊಹ್ಲಿ, ಭಾರತ ತಂಡದ ಜತೆ ತವರಿಗೆ ಆಗಮಿಸಿದ್ದರು. ಭಾರತಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ, ಮುಂಬೈನಲ್ಲಿ ರೋಡ್ ಷೋನಲ್ಲಿ ಪಾಲ್ಗೊಂಡ ಬಳಿಕ ಮರುದಿನವೇ ತಮ್ಮ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಭೇಟಿ ಮಾಡಲು ಲಂಡನ್‌ಗೆ ವಿಮಾನ ವೇರಿದ್ದರು.
ಅಲಿಬಾಗ್‌ನಲ್ಲಿರುವ ಐಶಾರಾಮಿ ಮನೆಯ ವಿಡಿಯೋ ಹಂಚಿಕೊಂಡ ವಿರಾಟ್..! ಹೇಗಿದೆ ನೋಡಿ ಕಿಂಗ್ ಕೊಹ್ಲಿ ಮನೆ
ಸದ್ಯ ಅನುಷ್ಕಾ ಶರ್ಮಾ ಹಾಗೂ ಮಕ್ಕಳಾದ ವಮಿಕಾ ಹಾಗೂ ಅಕಾಯ್ ಜತೆ ವಿರಾಟ್ ಕೊಹ್ಲಿ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಹಿಂದೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದರು. " ಓರ್ವ ಕ್ರೀಡಾಪಟುವಾಗಿ ಪ್ರತಿಯೊಬ್ಬರಿಗೂ ಕೊನೆಯ ದಿನ ಅಂತ ಇದ್ದೇ ಇರುತ್ತದೆ. ಯಾರೂ ಕೂಡಾ ಜೀವಿತಾವಧಿವರೆಗೂ ಆಡಲು ಸಾಧ್ಯವಿಲ್ಲ. ಹಾಂಗಂತ ನಾವು ನಿವೃತ್ತಿಯಾಗುವಾಗ ಯಾವುದೇ ಕೊರಗು ಇರಬಾರದು. ನಾವು ಆಡುವಾಗ ಸರ್ವಸ್ವವನ್ನೂ ನೀಡಿ ಆಡುತ್ತೇನೆ. ಆದರೆ ಒಂದು ದಿನ ಆಟ ನಿಲ್ಲಿಸಿದೆ ಎಂದರೆ, ಮತ್ತೆ ಇಲ್ಲೆಲ್ಲೂ ಕಾಣೋದಿಲ್ಲ" ಎಂದು ಹೇಳಿದ್ದರು.
ಇದೀಗ ವಿರಾಟ್ ಕೊಹ್ಲಿಯ ಆ ಹೇಳಿಕೆಗೂ, ಸದ್ಯ ವಿರಾಟ್ ಕೊಹ್ಲಿ ತಮ್ಮ ಬಿಡುವಿನ ಬಹುಪಾಲು ಸಮಯವನ್ನು ಲಂಡನ್‌ನಲ್ಲಿಯೇ ಕಳೆಯುತ್ತಿರುವದನ್ನು ಗಮನಿಸಿದರೆ, ಶಾಶ್ವತವಾಗಿ ವಿರಾಟ್ ಕೊಹ್ಲಿ, ಇಂಗ್ಲೆಂಡ್‌ನಲ್ಲಿಯೇ ನೆಲೆಯೂರುತ್ತಾರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಈ ವಿಚಾರವಾಗಿಯೇ ಹಲವು ನೆಟ್ಟಿಗರು ಆತಂಕ ಹಾಗೂ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.
ಇದೀಗ ವಿರಾಟ್ ಕೊಹ್ಲಿ, ಲಂಡನ್‌ನಲ್ಲಿಯೇ ತನ್ನ ಕುಟುಂಬದ ಜತೆ ಅಮೂಲ್ಯ ಸಮಯವನ್ನು ಎಂಜಾಯ್ ಮಾಡುತ್ತಿದ್ದು, ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಸರಣಿಯ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
