ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆ ಸ್ಟೇಡಿಯಂನ ಅವ್ಯವಸ್ಥೆ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಕ್ರಿಕೆಟ್ ಸ್ಟೇಡಿಯಂನ ಅವ್ಯವಸ್ಥೆಯನ್ನು ನೆಟ್ಟಿಗರು ಬಹಿರಂಗ ಪಡಿಸುವ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಜುಗರಕ್ಕೀಡಾಗುಂತೆ ಮಾಡಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನದಾಟ ಮಳೆಯಿಂದ ರದ್ದಾಗಿತ್ತು. ಇನ್ನು ಎರಡನೇ ದಿನದಾಟದ ವೇಳೆ ಸ್ಟೇಡಿಯಂನಲ್ಲಿರುವ ಕುರ್ಚಿಗಳು ಗಲೀಜಾಗಿರುವುದನ್ನು ನೆಟ್ಟಿಗರು ಫೋಟೋ ಸಮೇತ ಸೋಷಿಯಲ್ ಮೀಡಿಯಗಳಲ್ಲಿ ಹಂಚಿಕೊಳ್ಳುವ ಮೂಲಕ ಕೆಎಸ್‌ಸಿಎ ಅವ್ಯವಸ್ಥೆಯನ್ನು ಬಟಾಬಯಲು ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೆಎಸ್‌ಸಿಎ ಸ್ಟೇಡಿಯಂನ ಸೀಟ್‌ಗಳ ಮೇಲೆ ಪಾರಿವಾಳಗಳು ಹಿಕ್ಕೆ ಹಾಕಿರುವ ಫೋಟೊಗಳನ್ನು ನೆಟ್ಟಿಗರು ಶೇರ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಬೆಂಗಳೂರು ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳ ಪೆವಿಲಿಯನ್ ಪೆರೇಡ್; ಎರಡಂಕಿ ಮೊತ್ತಕ್ಕೆ ಆಲೌಟ್
ಇದು ಚಿನ್ನಸ್ವಾಮಿ ಸ್ಟೇಡಿಯಂನ 'ಎನ್' ಸ್ಟ್ಯಾಂಡ್, ಇದು ಹಣ ಕೊಟ್ಟು ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಬಿಸಿಸಿಐ ಕೊಡುವ ಗೌರವವಾಗಿದೆ ಎಂದು ವ್ಯಂಗ್ಯವಾಗಿ ಟ್ರೋಲ್ ಮಾಡಿದ್ದಾರೆ.
ಇನ್ನೋರ್ವ ನೆಟ್ಟಿಗ ನಾವು ಕೊಡುವ 2500 ರುಪಾಯಿಗೆ ಕನಿಷ್ಟ ಸೀಟ್ ಆದರೂ ಕ್ಲೀನ್ ಆಗಿರಲಿ ಎಂದು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ದೇಶದ ದುಬಾರಿ ಸ್ಟೇಡಿಯಂಗಳಲ್ಲಿ ಒಂದು. ಹೀಗಿದ್ದೂ ಸ್ವಚ್ಚತೆ ಕಾಪಾಡಿಲ್ಲ ಎಂದು ಮತ್ತೋರ್ವ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ 600 ರುಪಾಯಿನಿಂದ ಹಿಡಿದು 7500 ರುಪಾಯಿಯವರೆಗೆ ವಿವಿಧ ಹಂತದ ಬೆಲೆಯ ಟಿಕೆಟ್‌ಗಳು ಮಾರಾಟಕ್ಕಿವೆ. ಆದರೆ ಸ್ಟೇಡಿಯಂ ಸ್ವಚ್ಚತೆ ಮಾತ್ರ ನಾಚಿಕೆಗೇಡಿನದ್ದು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶವಾಗಿದೆ.
